ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ಪರಸ್ಪರ ವಾಗ್ಬಾಣ ಸುರಿಸಿದ್ದಾರೆ.
ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಯಾರೇ ಅಭ್ಯರ್ಥಿ ಕಣಕ್ಕಿಳಿಸಲಿ, ಕಾಂಗ್ರೆಸ್ ನಿಂದ ನಾನೇ ಕಣಕ್ಕಿಳಿಯೋದು ಎಂದು ಡಿಕೆ ಶಿವಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಅಶೋಕ್, ಚನ್ನಪಟ್ಟಣ ಜನತೆ ಜಾಣರಿದ್ದಾರೆ, ಅವರಿಗೆ ಏನು ಮಾಡಬೇಕು ಗೊತ್ತಿದೆ ಎಂದಿದ್ದಾರೆ.
ಈ ಹಿಂದೆ ಕುಮಾರಸ್ವಾಮಿಯವರನ್ನೇ ಭರ್ಜರಿ ಅಂತರದಲ್ಲಿ ಚನ್ನಪಟ್ಟಣ ಜನ ಗೆಲ್ಲಿಸಿದ್ದಾರೆ. ಇಲ್ಲಿನ ಜನರು ಜಾಣರು. ಅವರ ಮುಂದೆ ಡಿಕೆ ಶಿವಕುಮಾರ್ ಡ್ರಾಮಾ ಏನೂ ವರ್ಕೌಟ್ ಆಗಲ್ಲ. ಜನರಿಗೆ ಯಾರನ್ನು ಆಯ್ಕೆ ಮಾಡಬೇಕು ಎಂದು ಗೊತ್ತಿದೆ ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಇದಕ್ಕೆ ತಿರುಗೇಟು ಕೊಟ್ಟಿರುವ ಡಿಕೆ ಶಿವಕುಮಾರ್, ಚನ್ನಪಟ್ಟಣಕ್ಕೆ ಆರ್ ಅಶೋಕ್ ಒಂಥರಾ ವಿಸಿಟಿಂಗ್ ಡಾಕ್ಟರ್ ಇದ್ದ ಹಾಗೆ. ಅವರಿಗೆ ಅಲ್ಲಿನ ಜನರ ನಾಡಿಮಿಡಿತವೇ ಗೊತ್ತಿಲ್ಲ. ಅವರಿಂದ ಏನೂ ಆಗಲ್ಲ, ಸುಮ್ಮನೇ ಮಾತನಾಡುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಚನ್ನಪಟ್ಟಣ ಬೈ ಎಲೆಕ್ಷನ್ ಕದನ ಜೋರಾಗಿದ್ದು ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.