Publish Date: Fri, 30 Aug 2024 (15:24 IST)
Updated Date: Fri, 30 Aug 2024 (15:30 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಆರೋಪ ಮಾಡಿರುವ ಬಿಜೆಪಿಯವರೇ ಮುಂದೆ ಪಶ್ಚಾತ್ತಾಪ ಪಡುವ ಪ್ರಮೇಯ ಬರಲಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರ ನಂತರ ಸಿಎಂ ರೇಸ್ ನಲ್ಲಿ ನೀವಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಂಬಿ ಪಾಟೀಲ್, ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಹಾಗಿದ್ದ ಮೇಲೆ ಮುಂದಿನ ಮುಖ್ಯಮಂತ್ರಿ ಪ್ರಶ್ನೆಯೇ ಬರಲ್ಲ ಎಂದಿದ್ದಾರೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರದ್ದು ಎಳ್ಳಷ್ಟೂ ತಪ್ಪಿಲ್ಲ. ಹಾಗಿದ್ದರೂ ಬಿಜೆಪಿಯವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಂದೆ ಬಿಜೆಪಿಯವರೇ ಇದಕ್ಕೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಎದುರಾಗಲಿದೆ. ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡಿದಷ್ಟೂ ಅವರು ಬಲಿಷ್ಠರಾಗುತ್ತಾ ಹೋಗುತ್ತಾರೆ ಎಂದಿದ್ದಾರೆ.
ನಮ್ಮಲ್ಲಿ ಸಿಎಂ ಖುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಒಂದು ವೇಳೆ ಇದ್ದರೂ ಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧರಿಸುವವನು ನಾನಲ್ಲ. ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಇನ್ನು ಬೇರೆ ಅಭ್ಯರ್ಥಿ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.