ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಗೆ ನಾನೇ ಅಭ್ಯರ್ಥಿ ಎನ್ನುತ್ತಿರುವ ಸಿಪಿ ಯೋಗೇಶ್ವರ್ ಮೇಲೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಸಿಟ್ಟಾಗಿದ್ದಾರೆ.
ಇಂದು ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಯಾರು ಎಂಬ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕುಮಾರಸ್ವಾಮಿ ಮಹತ್ವದ ಮೀಟಿಂಗ್ ನಡೆಸಲಿದ್ದಾರೆ. ತಮ್ಮ ಕ್ಷೇತ್ರವನ್ನು ಯೋಗೇಶ್ವರ್ ಗೆ ಬಿಟ್ಟುಕೊಡಲು ಕುಮಾರಸ್ವಾಮಿ ತಯಾರಿಲ್ಲ.
ಈ ನಡುವೆ ಯೋಗೇಶ್ವರ್ ಗೇ ಟಿಕೆಟ್ ನೀಡಲು ಕುಮಾರಸ್ವಾಮಿ ಮೇಲೆ ಬಿಜೆಪಿ ನಾಯಕರು ಒತ್ತಡ ಹಾಕುತ್ತಿದ್ದಾರೆ. ಆದರೆ ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿರುವ ಯೋಗೇಶ್ವರ್ ಮೇಲೆ ಕುಮಾರಸ್ವಾಮಿ ಕೆಂಡವಾಗಿದ್ದಾರೆ. ಹೀಗಾಗಿ ಇಂದಿನ ಸಭೆಯಲ್ಲಿ ಕುಮಾರಸ್ವಾಮಿ ಮನವೊಲಿಸಲು ಪ್ರಯತ್ನ ನಡೆಯಲಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಇಲ್ಲದೇ ಹೋದರೆ ಬಿಎಸ್ ಪಿಯಿಂದಾದರೂ ಸ್ಪರ್ಧೆ ಮಾಡುವುದಾಗಿ ಯೋಗೇಶ್ವರ್ ಹಠ ಹಿಡಿದು ಕುಳಿತಿದ್ದಾರೆ.
ಹೀಗಾಗಿ ಯೋಗೇಶ್ವರ್ ಸ್ಪರ್ಧಯಿಂದ ಹಿಂದೆ ಸರಿಯುವಂತೆ ಮಾಡುವುದು ಸುಲಭವಲ್ಲ. ಹೀಗಾಗಿ ಕುಮಾರಸ್ವಾಮಿ ಮನವೊಲಿಸಲು ಚನ್ನಪಟ್ಟಣ ಕೈತಪ್ಪದಂತೆ ನೋಡಿಕೊಳ್ಳುವ ತಲೆನೋವು ಬಿಜೆಪಿ ನಾಯಕರದ್ದಾಗಿದೆ. ಇದಕ್ಕಾಗಿ ಇಂದಿನ ಸಭೆ ಮಹತ್ವದ್ದಾಗಿದೆ.