Select Your Language

Notifications

webdunia
webdunia
webdunia
webdunia

ಪ್ರಾಮಾಣಿಕ ಕುಮಾರಸ್ವಾಮಿ ನಕಲಿ ಕೆಲಸ ಮಾಡುವುದಿಲ್ಲ: ಡಿಕೆ ಶಿವಕುಮಾರ್ ವ್ಯಂಗ್ಯ

DCM DK Shivkumar

Sampriya

ಬೆಂಗಳೂರು , ಮಂಗಳವಾರ, 27 ಆಗಸ್ಟ್ 2024 (19:08 IST)
ಬೆಂಗಳೂರು: ರಾಜ್ಯಪಾಲರು ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಆಗಸ್ಟ್ 31ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘನತೆವೆತ್ತ ರಾಜ್ಯಪಾಲರು ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ಸೇರಿದಂತೆ ತಮ್ಮ ಮುಂದೆ ವಿಚಾರಣೆಗೆ ಅನುಮತಿ ಕೋರಿ ಬಾಕಿ ಇರುವ ಪ್ರಕರಣಗಳಲ್ಲೂ ಅನುಮತಿ ನೀಡಬೇಕು ಎಂದು ಮನವಿ ಮಾಡಲು ಕಾಂಗ್ರೆಸ್ ಪಕ್ಷದ ವತಿಯಿಂದ ಆಗಸ್ಟ್ 31ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

‌ನಮ್ಮ ಬಿಗ್ ಬ್ರದರ್, ಪ್ರಾಮಾಣಿಕ ಕುಮಾರಸ್ವಾಮಿ ಅವರ ವಿರುದ್ಧ ಅಕ್ರಮವಾಗಿ ಗಣಿಗಾರಿಕೆಗೆ ಮಂಜೂರು ಮಾಡಿದ ಪ್ರಕರಣವೂ ರಾಜ್ಯಪಾಲರ ಮುಂದಿದೆ. ಲೋಕಾಯುಕ್ತ ಸಂಸ್ಥೆಯು ಸುದೀರ್ಘ 10 ವರ್ಷಗಳ ತನಿಖೆ ನಡೆಸಿ ಕುಮಾರಸ್ವಾಮಿ ಅವರ ವಿಚಾರಣೆಗೆ ಅನುಮತಿ ಕೋರಿದ್ದಾರೆ. ಆದರೂ ವಿಚಾರಣೆಗೆ ಅನುಮತಿ ನೀಡಿಲ್ಲ. ಕುಮಾರಸ್ವಾಮಿ ಅವರು ಎಂದಿಗೂ ನಕಲಿ ಕೆಲಸ ಮಾಡುವುದಿಲ್ಲ ಕೇವಲ ಅಸಲಿ ಕೆಲಸ ಮಾಡುವವರು ಎಂದು ಲೇವಡಿ ಮಾಡಿದರು.

ಆಗಸ್ಟ್ 31ರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ತೆರಲಿ ಮನವಿ ಸಲ್ಲಿಸಲಾಗುವುದು. ಈ ವೇಳೆ ಮುಖ್ಯಮಂತ್ರಿಗಳು, ಎಲ್ಲಾ ಸಚಿವರು, ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ರಾಜ್ಯಪಾಲರು ಬೇರೆ ನಾಯಕರ ವಿರುದ್ಧ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ನೀಡಿಲ್ಲ. ಆದರೆ ಯಾವುದೇ ಪ್ರಾಥಮಿಕ ತನಿಖೆ ನಡೆಯದಿದ್ದರೂ ರಾಜ್ಯಪಾಲರು ಮಾನ್ಯ ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ತರಾತುರಿಲ್ಲಿ ಅನುಮತಿ ನೀಡಿದ್ದಾರೆ. ಹೀಗಾಗಿ ಕಳೆದ ವಾರ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾನ್ಯ ರಾಜ್ಯಪಾಲರಿಗೆ ಕೆಲವು ಸಲಹೆಗಳನ್ನು ಕಳುಹಿಸಿದ್ದೆವು. ರಾಜ್ಯಾಪಾಲರು ಬಹಳ ತರಾತುರಿಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಯಾವುದೇ ಪ್ರಾಥಮಿಕ ತನಿಖೆ ಇಲ್ಲದೇ, ಕೆಲವು ದೂರುಗಳನ್ನು ಆಧರಿಸಿ ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿದ್ದು ಈ ಬಗ್ಗೆ ಹೆಚ್ಚಿನ ವಿಚಾರ ಪ್ರಸ್ತಾಪ ಮಾಡುವುದಿಲ್ಲ. ನ್ಯಾಯಾಲಯ ಕಾನೂನಿನ ಪ್ರಕಾರ ಯಾವ ತೀರ್ಮಾನ ಮಾಡಬೇಕೋ ಮಾಡಲಿದೆ ಎಂದರು.

ಪ್ರಾಮಾಣಿಕ ಕುಮಾರಸ್ವಾಮಿ ನಕಲಿ ಕೆಲಸ ಮಾಡುವುದಿಲ್ಲ:

ರಾಜ್ಯದಲ್ಲಿ ಈಗಾಗಲೇ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಹಾಗೂ ಇತರೆ ಎಸ್ಐಟಿಗಳಿಂದ ರಾಜ್ಯಪಾಲರ ಬಳಿ ವಿಚಾರಣೆಗೆ ಅನುಮತಿ ನೀಡಿ ಎಂದು ಮನವಿ ಮಾಡಿರುವುದನ್ನು ಅವರ ಗಮನಕ್ಕೆ ತಂದಿದ್ದೇವೆ. ಈ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯಾಗಿ ಆರೋಪಪಟ್ಟಿ ಸಮೇತ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ದಿನಾಂಕ 21-11-2023ರಂದು ಲೋಕಾಯುಕ್ತ ಐಜಿಪಿ ಎಸ್ಐಟಿ ಅವರು ರಾಜ್ಯಪಾಲರಿಗೆ ಪತ್ರ ಬರೆದು, “2014ರಲ್ಲಿ ದಾಖಲಾದ ಪ್ರಕರಣ ಅಂದರೆ 10 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 420, 465, 468, 409, 120ಬಿ, ಐಪಿಸಿ 511, 13/2, ಸೇರಿದಂತೆ ವಿವಿಧ ಕಾಯ್ದೆ ಅಡಿ ಅಕ್ರಮ ಕಬ್ಬಿಣ ಅದಿರು ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ದಾಖಲಾದ ಪ್ರಕರಣದ ಸಂಪೂರ್ಣ ತನಿಖೆ ಮುಗಿದಿದ್ದು, ಈ ವರದಿ ಆಧಾರಿಸಿ ಈ ಪ್ರಕರಣ ಸಂಬಂಧ ಕುಮಾರಸ್ವಾಮಿ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು. ಈ ಪ್ರಕರಣದ 218 ಪುಟಗಳ ತನಿಖಾ ವರದಿಯನ್ನು ಈ ಪತ್ರದ ಜತೆಗೆ ಕಳುಹಿಸಿ ಕೊಡಲಾಗಿದೆ” ಎಂದು ಮನವಿ ಮಾಡಿದ್ದರು.

ಇನ್ನು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ಧದ ಪ್ರಕರಣದಲ್ಲೂ ಆರ್ಟಿಕಲ್ 17a ಪ್ರಕಾರ ಅವರ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಲೋಕಾಯುಕ್ತ ಸಂಸ್ಥೆ ಮನವಿ ಮಾಡಿತ್ತು. ಇನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧದ ಪ್ರಕರಣದಲ್ಲೂ ಪ್ರಾಥಮಿಕ ವಿಚಾರಣೆ ನಡೆದಿದ್ದು, ಅವರ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಜನಾರ್ದನ ರೆಡ್ಡಿ ಅವರ ವಿರುದ್ಧ ಡಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಅನುಮತಿ ನೀಡಿ ಎಂದು ಕೋರಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲೂ ಪ್ರಾಥಮಿಕ ತನಿಖೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಮಕೂರು ಮೂರು ರೈಲ್ವೆ ಕಾಮಗಾರಿ ಬಗ್ಗೆ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ಹೀಗಿತ್ತು