ಬೆಂಗಳೂರು: ಗೂಗಲ್ ಎಐ ಹಬ್ ಆಂಧ್ರಪ್ರದೇಶಕ್ಕೆ ಶಿಫ್ಟ್ ಆದ ಬಗ್ಗೆ ತಮಗೆ ಟಾಂಗ್ ನೀಡಿದ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಗೆ ಕರ್ನಾಟಕ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.
ಆಂಧ್ರಪ್ರದೇಶ ಗೂಗಲ್ ಸಂಸ್ಥೆಗೆ ಸಬ್ಸಿಡಿ ದರದಲ್ಲಿ ಭೂಮಿ, ಉಚಿತ ವಿದ್ಯುತ್ ನೀಡಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ನಾರಾ ಲೋಕೇಶ್ ನಮ್ಮ ಆಂಧ್ರದ ಊಟ ಸ್ವಲ್ಪ ಖಾರ ಅಂತಾರೆ. ನಮ್ಮ ನೆರೆಹೊರೆಯವರಿಗೂ ಈಗ ಖಾರದ ಅನುಭವವಾಗುತ್ತಿರಬೇಕು ಎಂದು ಲೇವಡಿ ಮಾಡಿದ್ದರು.
ಇದಕ್ಕೀಗ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ. ಎಲ್ಲರೂ ಸ್ವಲ್ಪ ಖಾರ ತಿನ್ನುವುದನ್ನು ಇಷ್ಟಪಡುತ್ತಾರೆ, ಆದರೆ ಅದನ್ನೇ ತಿನ್ನಲು ಸಾಧ್ಯವಿಲ್ಲ. ಆಹಾರ ತಜ್ಞರು ಹೇಳುವಂತೆ ಸಮತೋಲಿತ ಆಹಾರವೇ ಸರಿ. ಅದೇ ರಿತಿ ಬಜೆಟ್ ವಿಚಾರದಲ್ಲೂ ಸಮತೋಲನ ಅಗತ್ಯ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.
ನಮ್ಮ ನೆರೆಹೊರೆಯವರ ಸಾಲ 10 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಅವರು 1.16 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜಿಡಿಪಿ ದರ 3.61 ರಿಂದ 2.65 ಕ್ಕೆ ಇಳಿಕೆಯಾಗಿದೆ. ಯಾರು ಏನೇ ಹೇಳಲಿ ನಾವು ಬೇರೆಯವರಿಗೆ ಶತ್ರುಗಳಾಗಿರಬಹುದು, ನಮ್ಮವರ ಹೆಮ್ಮೆಯಾಗಿ ಉಳಿಯುತ್ತೇವೆ ಎಂದಿದ್ದಾರೆ.