ಬೆಂಗಳೂರು: ನಮ್ಮ ರಾಜ್ಯಕ್ಕೆ ಹೂಡಿಕೆದಾರರು ಬರೋದನ್ನು ನೋಡಿ ನೆರೆಹೊರೆಯವರಿಗೆ ಮೆಣಶಿನಕಾಯಿ ಇಟ್ಟಂಗೆ ಉರಿಯುತ್ತಿರಬಹುದು ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟಿದ್ದಾರೆ.
ಆಂಧ್ರಪ್ರದೇಶದ ಆಹಾರ ಖಾರ ಎಂದು ಹೇಳಲಾಗುತ್ತದೆ. ನಮ್ಮ ಕೆಲವು ಹೂಡಿಕೆಗಳೂ ಹಾಗೇ ಇವೆ ಎನಿಸುತ್ತಿದೆ. ನಮ್ಮ ಕೆಲವು ನೆರೆಹೊರೆಯವರು ಈಗಾಗಲೇ ಉರಿದುಕೊಳ್ಳುತ್ತಿದ್ದಾರೆ ಎಂದು ನಾರಾ ಲೋಕೇಶ್ ಟ್ವೀಟ್ ಮಾಡಿದ್ದಾರೆ.
ವಿಶಾಖಪಟ್ಟಣದಲ್ಲಿ ಗೂಗಲ್ ಸಂಸ್ಥೆ 1.3 ಲಕ್ಷ ಕೋಟಿ ಹೂಡಿಕೆ ಮಾಡುತ್ತಿರುವ ವಿಚಾರಕ್ಕೆ ಈಗಾಗಲೇ ಕರ್ನಾಟಕದ ಪ್ರಿಯಾಂಕ್ ಖರ್ಗೆ ಮತ್ತು ನಾರಾ ಲೋಕೇಶ್ ನಡುವೆ ಟ್ವೀಟ್ ವಾರ್ ನಡೆಯುತ್ತಲೇ ಇದೆ.
ಗೂಗಲ್ ಕಂಪನಿಗೆ ಆಂಧ್ರಪ್ರದೇಶ ನೀಡಿದ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಕ್ಕೆ ಆಂಧ್ರ ಐಟಿ ಸಚಿವ ನಾರಾ ಲೋಕೇಶ್ ಈ ರೀತಿ ತಿರುಗೇಟು ಕೊಟ್ಟಿದ್ದಾರೆ. ಆಂಧ್ರಪ್ರದೇಶ ಗೂಗಲ್ ಕಂಪನಿಗೆ 22,000 ಕೋಟಿ ರೂ. ಪ್ರೋತ್ಸಾಹ ಧನ, 25% ಸಬ್ಸಿಡಿಗೆ ಭೂಮಿ, ನೀರು, ವಿದ್ಯುತ್ ಸೌಲಭ್ಯಕ್ಕೆ ಸಬ್ಸಿಡಿ ನೀಡಿದೆ. ನಾವೇನಾದರೂ ಹೀಗೆ ಮಾಡಿದ್ದರೆ ಆರ್ಥಿಕ ವಿಪತ್ತಿಗೆ ಕಾರಣವಾಗಿದ್ದೇವೆ ಎಂಬ ಅಪವಾದ ಬರುತ್ತಿತ್ತು ಎಂದು ಪ್ರಿಯಾಂಕ್ ಹೇಳಿದ್ದರು. ಪ್ರಿಯಾಂಕ್ ಹೊಟ್ಟೆ ಉರಿದುಕೊಂಡು ಈ ಹೇಳಿಕೆ ನೀಡಿದ್ದಾರೆ ಎಂದು ನಾರಾ ಲೋಕೇಶ್ ವ್ಯಂಗ್ಯ ಮಾಡಿದ್ದಾರೆ.