ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ಕಾವೇರಿ, ತೀರ್ಥರೂಪಿಣಿಯಾಗಿ ಆವಿರ್ಭವಿಸಲಿದ್ದಾಳೆ. ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥೋದ್ಭವ ನಡೆಯಲಿದೆ. ಜೀವ ನದಿಯನ್ನ ಕಣ್ತುಂಬಿಸಿಕೊಳ್ಳಲು ಸಹಸ್ರಾರು ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ತುಲಾ ಮಾಸದ ಮೊದಲ ದಿನ ಅಂದರೆ ತುಲಾ ಸಂಕ್ರಮಣದ ದಿನ ಪ್ರತಿ ವರ್ಷ ಕಾವೇರಿ ಕೊಡಗಿನ ಮಡಿಕೇರಿ ತಾಲೂಕಿನ ತಲಕಾವೇರಿಯ ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಈ ಪವಿತ್ರ ಘಳಿಗೆಯನ್ನು ಕಣ್ತುಂಬಿಸಿಕೊಳ್ಳಲು ದೇಶದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ತುಲಾ ಲಘ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಮಧ್ಯ ರಾತ್ರಿ ತೀರ್ಥೋದ್ಭವವಾಗುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.