Publish Date: Fri, 20 Jul 2018 (16:07 IST)
Updated Date: Fri, 20 Jul 2018 (16:10 IST)
ರಾಜ್ಯದ ವಿವಿಧೆಡೆ ಮಳೆಯು ಸುರಿಯುತ್ತಿದೆ. ಹಲವೆಡೆ ಭಾರಿ ಅನಾಹುತ ಆಗುವಂತೆ ಮಳೆರಾಯ ತನ್ನ ಆರ್ಭಟ ತೋರುತ್ತಿದ್ದಾನೆ. ಕೆಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಆದರೆ ಆ ಜಿಲ್ಲೆಯಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಹೀಗಾಗಿ ಮಳೆಗಾಗಿ ಪ್ರಾರ್ಥಿಸಿ ಆ ಊರಿನ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಮಾತ್ರ ಮಳೆಯ ಸಿಂಚನವಿಲ್ಲ. ಇದರಿಂದ ವರುಣದೇವ ಮುನಿಸಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಕತ್ತೆಗಳಿಗೆ ಮದುವೆ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಮಳೆ ಬರುತ್ತದೆ ಎಂದು ನಂಬಿ ಕತ್ತೆಗಳಿಗೆ ಮೆರವಣಿಗೆ ಮಾಡಿದ್ದಾರೆ.
ಗ್ರಾಮದಲ್ಲಿ ಮಳೆ ಇಲ್ಲದ್ದರಿಂದ ರೈತರು ಪರಿತಪಿಸುವಂತಾಗಿದೆ. ಕೈ ಬಂದ ಫಸಲು ಸಹ ಮಳೆ ಇಲ್ಲದೆ ಒಣಗುತ್ತಿದೆ. ಆದಷ್ಟು ಬೇಗ ಮಳೆ ಬಂದರೆ ರೈತರಿಗೆ ಉಳಿಗಾಲ ಎನ್ನುವ ಮಾತು ಮಳೆಯನ್ನೆ ನಂಬಿರುವ ರೈತರದ್ದಾಗಿದೆ. ಹೀಗಾಗಿ ವರುಣ ದೇವನಿಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಿದ್ದಾರೆ.