Publish Date: Tue, 02 Jul 2024 (10:18 IST)
Updated Date: Tue, 02 Jul 2024 (10:20 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಈಗ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಅವರ ವಿರುದ್ಧ ಹಳೆಯ ಪ್ರಕರಣಗಳನ್ನೂ ಓಪನ್ ಮಾಡಲು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ದರ್ಶನ್ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ. 2011 ರಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿ 28 ದಿನ ನ್ಯಾಯಾಂಗ ಬಂಧನದಲ್ಲಿದ್ದರು. ಬಳಿಕ ಹಿರಿಯರ ಮಧ್ಯಸ್ಥಿಕೆಯಿಂದ ಪತ್ನಿ ವಿಜಯಲಕ್ಷ್ಮಿ ಕೇಸ್ ವಾಪಸ್ ಪಡೆದು ಪ್ರಕರಣ ಸುಖಾಂತ್ಯವಾಗಿತ್ತು.
ಆದರೆ ಇದು ಇಷ್ಟಕ್ಕೇ ನಿಂತಿರಲಿಲ್ಲ. ಅದರಲ್ಲೂ ಇತ್ತೀಚೆಗಂತೂ ದರ್ಶನ್ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ನಾಯಿ ಬಿಟ್ಟು ಮಹಿಳೆ ಮೇಲೆ ಹಲ್ಲೆ, ಅಕ್ರಮವಾಗಿ ಪ್ರಾಣಿಗಳ ಸಾಕಣೆ, ಬಾರ್ ನಲ್ಲಿ ಮಧ್ಯರಾತ್ರಿವರೆಗೆ ಪಾರ್ಟಿ, ರೆಸ್ಟೋರೆಂಟ್ ನೌಕರನ ಮೇಲೆ ಹಲ್ಲೆ ಇತ್ಯಾದಿ ಹಲವು ಘಟನೆಗಳು ಕೇಳಿಬಂದಿತ್ತು.
ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ವಿರುದ್ಧ ಹಳೆಯ ಪ್ರಕರಣಗಳನ್ನೆಲ್ಲಾ ರಿ ಓಪನ್ ಮಾಡಿಸಲು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಇದಾದ ಬಳಿಕ ರೌಡಿ ಶೀಟ್ ತೆರೆಯಲೂ ಚಿಂತನೆ ನಡೆಸುತ್ತಿದ್ದಾರಂತೆ. ಇದೂ ಆಗಿಬಿಟ್ಟರೆ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಗ್ಯಾರಂಟಿ.