ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ರನ್ನು ನೋಡಲು ಕೊನೆಗೂ ಅವರ ತಾಯಿ ಮೀನಾ ತೂಗುದೀಪ ಹಾಗೂ ಸಹೋದರ ದಿನಕರ್ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ.
ನಟ ದರ್ಶನ್ ರಿಂದ ಇತ್ತೀಚೆಗಿನ ದಿನಗಳಲ್ಲಿ ಸಹೋದರ ದಿನಕರ್ ಮತ್ತು ತಾಯಿ ಮೀನಾ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಮಗ ಜೈಲು ಪಾಲಾಗಿ ಎರಡು ವಾರಗಳ ಬಳಿಕ ತಾಯಿ ಮೀನಾ ತಮ್ಮ ಇನ್ನೊಬ್ಬ ಪುತ್ರ, ನಿರ್ದೇಶಕ ದಿನಕರ್ ತೂಗುದೀಪ ಜೊತೆ ಜೈಲಿಗೆ ಬಂದಿದ್ದಾರೆ.
ಕಳೆದ ವಾರವೇ ಮೀನಾ ತಮ್ಮ ಮಗನನ್ನು ನೋಡಲು ಜೈಲಿಗೆ ಬರಲಿದ್ದಾರೆ ಎಂಬ ಸುದ್ದಿಗಳಿತ್ತು. ದರ್ಶನ್ ಕೂಡಾ ತಮ್ಮ ತಾಯಿಯನ್ನು ನೋಡಲು ಆಸೆ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಇದೀಗ ಮೀನಾ ಹಾಗೂ ದಿನಕರ್ ಜೈಲಿಗೆ ಭೇಟಿ ನೀಡಿದ್ದಾರೆ. ಆದರೆ ಈ ವೇಳೆ ಅವರು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಎಚ್ಚರಿಕೆ ವಹಿಸಲಾಗಿದೆ.
ಪೊಲೀಸರೇ ಅವರನ್ನು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಗುಟ್ಟು ಗುಟ್ಟಾಗಿ ಜೈಲಿಗೆ ಕರೆದೊಯ್ದು ದರ್ಶನ್ ಭೇಟಿ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಮೊನ್ನೆಯಷ್ಟೇ ದರ್ಶನ್ ಆಪ್ತರಾಗಿರುವ ರಕ್ಷಿತಾ ಮತ್ತು ಪ್ರೇಮ್ ದಂಪತಿ ಜೈಲಿಗೆ ಭೇಟಿ ನೀಡಿದ್ದರು. ಇದೀಗ ದರ್ಶನ್ ತಾಯಿ, ಸಹೋದರ ಬಂದಿದ್ದಾರೆ.