Publish Date: Thu, 09 Aug 2018 (14:04 IST)
Updated Date: Thu, 09 Aug 2018 (14:06 IST)
ಎಮ್ಮೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಿ ವ್ಯಕ್ತಿಯೋರ್ವನನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಥಳಿಸಿದ ಘಟನೆ ನಡೆದಿದೆ. ಬೀದರ್ ಜಿಲ್ಲೆ ಔರಾದ್ ತಾಲೂಕಿನ ಠಾಣಾ ಕುಶನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವಾರದ ಹಿಂದೆ ಔರಾದ್ ತಾಲೂಕಿನ ಬೆಡಕುಂದಾ ಗ್ರಾಮದಲ್ಲಿ ಎರಡು ಎಮ್ಮೆಗಳ ಕಳ್ಳತನವಾಗಿದ್ದವು. ಇದೇ ಗ್ರಾಮದ 25 ವರ್ಷದ ಅಮೂಲ್ ನ ಮೇಲೆ ಕಳ್ಳತನ ಆರೋಪ ಹೊರೆಸಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. 8 ಎಂಟು ದಿನಗಳ ಕಾಲ ನನ್ನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಪೊಲೀಸರ ವಿರುದ್ಧ ಯುವಕ ಗಂಭೀರವಾದ ಆರೋಪ ಮಾಡುತ್ತಿದ್ದಾನೆ. ಇದಕ್ಕೆ ಪುಷ್ಟಿ ನೀಡುವಂತೆ ಯುವಕನ ಕಾಲಿಗೆ ಕಪ್ಪಾದ ಕಲೆಗಳು ಮೂಡಿವೆ.
ಪೊಲೀಸರ ಹಲ್ಲೆಯಿಂದ ಈಗ ಬೀದರ್ ಜಿಲ್ಲಾಸ್ಪತ್ರೆಗೆ ದಾಖಲಾಗಿ ಯುವಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಪೊಲೀಸರು ವಿನಾಕಾರಣ ಕಳ್ಳತನದ ಆರೋಪದ ಮೇಲೆ 8 ದಿನ ಠಾಣೆಯಲ್ಲಿ ಕೂಡಿಹಾಕಿ ಕಿರುಕುಳ ನೀಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಕೂಡಾ ಯುವಕ ಹೇಳಿದ್ದು, ಹಲ್ಲೆ ಮಾಡಿದ ಪೊಲೀಸರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಯುವಕನ ಕುಟುಂಬದವರು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.