Select Your Language

Notifications

webdunia
webdunia
webdunia
webdunia

ತುಂತುರು ಮಳೆ ನಡುವೆಯೂ ಪೊಲೀಸ್ ಬ್ಯಾಂಡ್… ನಾದಕ್ಕೆ ತಲೆದೂಗಿದ ಯದುವೀರ್ ದಂಪತಿ

police band
ಮೈಸೂರು , ಮಂಗಳವಾರ, 26 ಸೆಪ್ಟಂಬರ್ 2017 (16:49 IST)
ಮೈಸೂರು: ತುಂತುರು ಮಳೆಯಲ್ಲಿಯೇ ಪೊಲೀಸ್ ಬ್ಯಾಂಡ್ ವಾದನಕ್ಕೆ ಮೈಮರೆತು ನಿಂತ ಸಂಗೀತ ಪ್ರೇಮಿಗಳು ವರುಣನಿಗೆ ಸವಾಲು ಹಾಕಿ ಸುಶ್ರಾವ್ಯ ಸಂಗೀತ ಆಸ್ವಾದಿಸಿದರು. ಮೈಸೂರಿನ ಅರಮನೆ ಸಾಂಸ್ಕೃತಿಕ ವೇದಿಕೆ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸಮೂಹ ವಾದ್ಯಮೇಳಕ್ಕೆ ವರುಣ ಸಹ ಸಾಥ್ ನೀಡಿದ್ದ.

ಇಂಗ್ಲೀಷ್  ಬ್ಯಾಂಡ್ ಮಾಸ್ಟರ್ ಆಲ್‍ಫೆಡ್ ಸುರೇಂದ್ರಕುಮಾರ್ ನೇತೃತ್ವದಲ್ಲಿ ಅರಮನೆ ಗಜಲಕ್ಷ್ಮಿ ಗೇಟ್‍ನಿಂದ ರಾಯಲ್ ಫ್ಯಾನ್‍ಫೇರ್ ವಾದ್ಯ ನುಡಿಸುತ್ತ ನಿಧಾನವಾಗಿ ಅರಮನೆ ಆವರಣ ಪ್ರವೇಶಿಸಿದ, 21 ಪೊಲೀಸ್ ವಾದ್ಯಮೇಳದ ತಂಡಗಳು ಹೆರಾಲ್ಡ್ ಟ್ರಂಪೇಟ್ ನುಡಿಸುತ್ತ ಆಸ್ಟ್ರೋನೆಟ್ ಮಾರ್ಚ್ ಮಾಡಿದರು. ನಂತರ ಗಣ್ಯರಿಗೆ ಜನರಲ್ ಸೆಲ್ಯೂಟ್ ನೀಡಿ `ವಿಜಯಭಾರತಿ' ಹಾಗೂ `ಕ್ವೀನ್‍ಕಲರ್ಸ್' ವಾದ್ಯ ನುಡಿಸಿದರು.

ಬಳಿಕ ಕರ್ನಾಟಿಕ್ ಪೊಲೀಸ್ ಬ್ಯಾಂಡ್ ಹಾಗೂ ಇಂಗ್ಲೀಷ್ ಪೊಲೀಸ್ ಬ್ಯಾಂಡ್ ಜುಗಲ್‍ಬಂದಿ ನಡೆಯಿತು. ಜಯಚಾಮರಾಜ ಒಡೆಯರ್ ವಿರಚಿತ ಮಾತೆ ಮಲಯ ಧ್ವಜಗೀತೆ ನುಡಿಸಿ, ಮಳೆಯಲ್ಲೇ ನೆನೆಯುತ್ತ ನಿಂತಿದ್ದ ಸಂಗೀತ ಪ್ರೇಮಿಗಳಿಗೆ ಇಂಪು ನೀಡಿದರು.

ರಾಜಸ್ಥಾನ್, ಅಬೈಡ್ ವಿತ್ ಮಿ, ಸಾರೇ ಜಹಾಂಸೆ ಅಚ್ಚಾ ಗೀತೆಗಳನ್ನು ನುಡಿಸಿ, ಅಲ್ಪಾವಧಿಯಲ್ಲಿ ಸಮೂಹ ವಾದ್ಯಮೇಳಕ್ಕೆ ತೆರೆ ಎಳೆದರು. ಬ್ಯಾಂಡ್ ಸ್ಪರ್ಧೆಯ ಬಿಗ್‍ಬ್ಯಾಂಡ್ ಸ್ಪರ್ಧೆಯಲ್ಲಿ ಮೈಸೂರಿನ ಕೆಎಸ್‍ಆರ್‍ಪಿ 5ನೇ ಪಡೆ ಮೊದಲನೇ ಸ್ಥಾನಗಳಿಸಿದರೆ, ಬೆಂಗಳೂರಿನ ಕೆಎಸ್‍ಆರ್‍ಪಿ 4ನೇ ಪಡೆ ದ್ವಿತೀಯ ಸ್ಥಾನ ಪಡೆಯಿತು. ಮೀಡಿಯಂ ಬ್ಯಾಂಡ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕೆಎಸ್‍ಆರ್‍ಪಿ 8ನೇ ಪಡೆ ಮೊದಲನೇ ಬಹುಮಾನ ಪಡೆದುಕೊಂಡರೆ, ಶಿಗ್ಗಾಂವ್‍ನ ಕೆಎಸ್‍ಆರ್‍ಪಿಯ 10ನೇ ಪಡೆ 2ನೇ ಸ್ಥಾನ ನಡೆಯಿತು. 

ನಾದಕ್ಕೆ ಮನಸೋತ ಒಡೆಯರ್ ದಂಪತಿ

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದೇವಿ ಒಡೆಯರ್ ಅವರು ಪೊಲೀಸ್ ಬ್ಯಾಂಡ್ ವಾದ್ಯಮೇಳವನ್ನು ನೋಡಲು ಗ್ಯಾಲರಿಯಲ್ಲಿ ಬಂದು ಕುಳಿತಿದ್ದರು. ಮಳೆ ಕಾರಣದಿಂದ ಪೊಲೀಸ್ ವಾದ್ಯಮೇಳ ಮುಂದೂಡಲಾಗಿತ್ತು. ಆದರೆ ಪೊಲೀಸ್ ತಂಡದವರು ಒಡೆಯರ್ ದಂಪತಿಗೆ ನಿರಾಶೆಗೊಳಿಸದೆ ಆನೆಬಾಗಿಲು ಮುಂಭಾಗದಲ್ಲಿ ಅವರಿಗಾಗಿಯೇ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, `ಗೊಂಬೆ ಹೇಳುತೈತೆ ನೀನೇ ರಾಜಕುಮಾರ', ‘ಫರ್‍ದೇಶಿ ಫರ್‍ದೇಶಿ ಜನಾ ನಹೀ' ಮತ್ತಿತರ ಕನ್ನಡ ಮತ್ತು ಹಿಂದಿ ಗೀತೆಗಳನ್ನು ಒಂದು ಗಂಟೆಗೂ ಹೆಚ್ಚು ಕಾಲ ನುಡಿಸಿದರು. ಪೊಲೀಸರ ವಾದ್ಯಮೇಳಕ್ಕೆ ಯದುವೀರ್ ಒಡೆಯರ್ ದಂಪತಿ ಮನಸೋತರು.

Share this Story:

Follow Webdunia kannada

ಮುಂದಿನ ಸುದ್ದಿ

ಹನಿಪ್ರೀತ್ ಪೊಲೀಸರಿಗೆ ಶರಣಾಗಲೇಬೇಕು: ಹೈಕೋರ್ಟ್