ನವದೆಹಲಿ: ಪಹಲ್ಗಾಮ್ ದಾಳಿಕೋರರು ಪಾಕಿಸ್ತಾನದಿಂದಲೇ ಬಂದವರು ಎನ್ನುವುದಕ್ಕೆ ಪುರಾವೆ ಏನು ಎಂದು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಚಿದಂಬರಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಸಂಸತ್ತಿನಲ್ಲಿ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತ ಚರ್ಚೆಗಳಾಗುತ್ತಿವೆ. ಇದಕ್ಕೆ ಮೊದಲು ಪಿ ಚಿದಂಬರಂ ಹೇಳಿಕೆ ಬಿರುಗಾಳಿ ಎಬ್ಬಿಸಿದೆ. ಇದು ಬಿಜೆಪಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಇದು ಕಾಂಗ್ರೆಸ್ ನ ಮನಸ್ಥಿತಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಪಹಲ್ಗಾಮ್ ನಲ್ಲಿ ದಾಳಿ ನಡೆಸಿದವರು ಪಾಕಿಸ್ತಾನದಿಂದಲೇ ಬಂದವರು ಎಂದು ಹೇಗೆ ಹೇಳ್ತೀರಿ? ಇದಕ್ಕೆ ಪುರಾವೆ ಏನಿದೆ? ದೇಶದೊಳಗೇ ಇದ್ದ ಭಯೋತ್ಪಾದಕರೂ ಈ ಕೆಲಸ ಮಾಡಿರಬಹುದಲ್ವೇ? ಎಂದು ಪ್ರಶ್ನೆ ಮಾಡಿದ್ದಾರೆ. ಪಹಲ್ಗಾಮ್ ದಾಳಿಯಿಂದ ಭಾರತಕ್ಕೆ ಎಷ್ಟು ಹಾನಿಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸುತ್ತಿಲ್ಲ ಎಂದಿದ್ದಾರೆ.
ಅವರ ಹೇಳಿಕೆಗೆ ಬಿಜೆಪಿ ಮಾತ್ರವಲ್ಲ, ಸಾರ್ವಜನಿಕರೂ ತೀವ್ರ ಟೀಕೆ ಮಾಡಿದ್ದಾರೆ. ಪಾಕಿಸ್ತಾನಿಯರಂತೆ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ. ಈ ಹಿಂದೆ ಆಪರೇಷನ್ ಸಿಂಧೂರ್ ಬಗ್ಗೆ ಕಾಂಗ್ರೆಸ್ ನ ಕೆಲವು ನಾಯಕರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ಇದೀಗ ಪಿ ಚಿದಂಬರಂ ಇಂತಹದ್ದೊಂದು ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.