ನವದೆಹಲಿ: ಅತ್ತ ಕೇಂದ್ರ ಸರ್ಕಾರ ಜಿಎಸ್ ಟಿ ಕಡಿಮೆ ಮಾಡಿ ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಕಡಿಮೆಯಾಗಿದ್ದರೆ ಇತ್ತ ಬೆಂಗಳೂರಿನಲ್ಲಿ ನಂದಿನಿ ದೇಸೀ ಹಾಲಿನ ದರವನ್ನು ಭಾರೀ ಏರಿಕೆ ಮಾಡಿ ಬರೆ ಹಾಕಲಾಗಿದೆ.
ಕೇಂದ್ರ ಸರ್ಕಾರ ಜಿಎಸ್ ಟಿ ಕಡಿತಗೊಳಿಸಿರುವುದರಿಂದ ಹಲವು ನಂದಿನಿ ಉತ್ಪನ್ನಗಳ ಬೆಲೆಯೂ ಕಡಿಮೆಯಾಗಿತ್ತು. ನಂದಿನಿ ತುಪ್ಪ, ಚೀಸ್, ತಿನಿಸುಗಳ ಮೇಲಿನ ಜಿಎಸ್ ಟಿ ಕಡಿತವಾಗಿ 10-20 ರೂ.ಗಳಷ್ಟು ಬೆಲೆ ಕಡಿಮೆಯಾಗಿತ್ತು.
ಆದರೆ ಜನರು ಈ ಖುಷಿಯಲ್ಲಿರುವಾಗಲೇ ನಂದಿನಿ ದೇಸೀ ಹಾಲಿನ ದರವನ್ನು ಬರೋಬ್ಬರಿ 40 ರೂ. ಏರಿಕೆ ಮಾಡಲಾಗಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟ ದೇಸೀ ಹಾಲಿನ ದರವನ್ನು ಏರಿಕೆ ಮಾಡಿದ್ದು ಈಗ ಪ್ರತೀ ಲೀಟರ್ ಗೆ 120 ರೂ.ಗಳಾಗಿವೆ.
ಈ ಮೊದಲು ದೇಸೀ ಹಾಲಿನ ದರ ಪ್ರತೀ ಲೀ.ಗೆ 80 ರೂ.ಗಳಷ್ಟಿತ್ತು. ಆದರೆ ಈಗ ಏಕಾಏಕಿ 40 ರೂ. ಏರಿಕೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈ ದರ ಏರಿಕೆ ಬಮೂಲ್ ಗೆ ಮಾತ್ರ ಸೀಮಿತವಾಗಿರಲಿದೆ. ಈ ಹಾಲಿನ ದರ ಏರಿಕೆ ಲಾಭವನ್ನು ರೈತರಿಗೆ ನೀಡಲಾಗುವುದು ಎಂದು ಬಮೂಲ್ ಸಮಜಾಯಿಷಿ ನೀಡಿದೆ.