ಬೆಂಗಳೂರು: ಜಿಎಸ್ ಟಿ ನಿಯಮದಲ್ಲಿ ಕೇಂದ್ರ ಸರ್ಕಾರ ಕೆಲವು ಬದಲಾವಣೆಗಳನ್ನು ತಂದಿದ್ದು ಮಧ್ಯಮ ವರ್ಗದವರು ಉಪಯೋಗಿಸುವ ವಸ್ತುಗಳ ಬೆಲೆ ಕಡಿಮೆಯಾಗಿದೆ. ಆದರೆ ಐಪಿಎಲ್ ಟಿಕೆಟ್ ದರದ ಮೇಲಿದ್ದ ಜಿಎಸ್ ಟಿ ಹೆಚ್ಚಾಗಿದ್ದು ಆರ್ ಸಿಬಿ ಮ್ಯಾಚ್ ನೋಡುವ ಹಣದಲ್ಲಿ ಇನ್ನು ಒಂದು ವಾರ ಜೀವನ ಮಾಡಬಹುದು.
ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್ ದರ ಯಾವತ್ತೂ ಬಲು ದುಬಾರಿಯೇ. ಬೇರೆ ನಗರಗಳಿಗೆ ಹೋಲಿಸಿದರೆ ಇಲ್ಲಿ ದುಬಾರಿಯಾಗಿದ್ದು ಐಪಿಎಲ್ ಟಿಕೆಟ್ ದರ ಆರಂಭಿಕ ಬೆಲೆಯೇ 600 ರೂ. ನಿಂದ ಇರುತ್ತಿತ್ತು. ಇದುವರೆಗೆ ಐಪಿಎಲ್ ಟಿಕೆಟ್ ದರ 28% ಜಿಎಸ್ ಟಿ ಸ್ಲ್ಯಾಬ್ ನಲ್ಲಿ ಬರುತ್ತಿತ್ತು.
ಹೀಗಿದ್ದಾಗ 500 ರೂ. ಟಿಕೆಟ್ ದರವಿದ್ದರೆ ಜಿಎಸ್ ಟಿ ಸೇರಿ 640 ರೂ. ಆಗುತ್ತಿತ್ತು. ಆದರೆ ಈಗ 28% ಜಿಎಸ್ ಟಿ ಸ್ಲ್ಯಾಬ್ ರದ್ದಾಗಿದೆ. ಇದೀಗ ಐಪಿಎಲ್ ಟಿಕೆಟ್ ದರವನ್ನು 40% ಜಿಎಸ್ ಟಿ ಸ್ಲ್ಯಾಬ್ ಗೆ ಸೇರಿಸಲಾಗಿದೆ. ಹೀಗಾಗಿ ಐಪಿಎಲ್ ಟಿಕೆಟ್ ಗಳು ಇನ್ನಷ್ಟು ದುಬಾರಿಯಾಗಲಿದೆ.
ಅಂದರೆ 500 ರೂ. ಟಿಕೆಟ್ ದರವಿದ್ದರೆ ಇನ್ನು 700 ರೂ. ಗೆ ಏರಿಕೆಯಾಗಲಿದೆ. ಇದು ಕನಿಷ್ಠ ದರ. ಕಳೆದ ಸೀಸನ್ ನಲ್ಲಿ ಒಂದು ಟಿಕೆಟ್ ದರ 40 ಸಾವಿರ ರೂ.ವರೆಗೆ ಮಾರಾಟವಾಗಿದ್ದೂ ಇದೆ. ಹೀಗಾದಲ್ಲಿ ಬರೋಬ್ಬರಿ 4,000 ರೂ. ಹೆಚ್ಚು ಪಾವತಿ ಮಾಡಬೇಕು. ಹೀಗಾಗಿ 2026 ನೇ ಆವೃತ್ತಿಯಿಂದ ಐಪಿಎಲ್ ಟಿಕೆಟ್ ಮಧ್ಯಮವರ್ಗದವರಿಗೆ ಹೊರೆಯಾಗಲಿದೆ.