Publish Date: Tue, 17 Jun 2025 (12:26 IST)
Updated Date: Tue, 17 Jun 2025 (12:29 IST)
ಮೈಸೂರು: ಆಷಾಢ ಶುಕ್ರವಾರದಂದು ನಾಡದೇವತೆ ಚಾಮುಂಡಿ ತಾಯಿಯ ವಿಶೇಷ ದರ್ಶನ ಪಡೆಯಲು 2,000 ರೂ. ಫಿಕ್ಸ್ ಮಾಡಲಾಗಿದ್ದು ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜೂನ್ 27 ರಂದು ಆಷಾಢ ಶುಕ್ರವಾರ ಆರಂಭವಾಗಲಿದೆ. ಪ್ರತೀ ವರ್ಷ ಆಷಾಢ ಶುಕ್ರವಾರದಂದು ಚಾಮುಂಡಿ ತಾಯಿಯ ದರ್ಶನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಮೈಸೂರು ನಾಡದೇವತೆಯ ಸನ್ನಧಿಗೆ ಭಕ್ತರು ಬರುತ್ತಾರೆ. ವಿಐಪಿಗಳೂ ಇದೇ ದಿನ ದೇವಿಯ ದರ್ಶನ ಪಡೆದು ಪೂಜೆ ಮಾಡುತ್ತಾರೆ.
ಆದರೆ ಈ ಬಾರಿ ವಿಶೇಷ ದರ್ಶನಕ್ಕೆ 2,000 ರೂ. ನಿಗದಿಪಡಿಸಲಾಗಿದೆ. ಇಂತಹದ್ದೊಂದು ವ್ಯವಸ್ಥೆ ಮಾಡಿರುವುದು ಇದೇ ಮೊದಲು. ಈ ಬಾರಿ ದರ್ಶನಕ್ಕೆ ವಿಶೇಷ ಪಾಸ್ ನಿಷೇಧಿಸಲಾಗಿದೆ. ಜೊತೆಗೆ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನೂ ನಿರ್ಬಂಧಿಸಲಾಗಿದೆ.
ಇದರ ಬದಲು 2,000 ರೂ. ವಿಶೇಷ ಟಿಕೆಟ್ ನೀಡಲಾಗುತ್ತದೆ. ಇದನ್ನು ಮಾಡಿಸಿಕೊಂಡರೆ ಎಸಿ ಬಸ್ ನಲ್ಲಿ ಬೆಟ್ಟಕ್ಕೆ ತೆರಳಿ ದರ್ಶನ ಮಾಡಿಕೊಂಡು ಬರಬಹುದು. ಆದರೆ ಇದಕ್ಕೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದು ಹಗಲು ದರೋಡೆ. ಗ್ಯಾರಂಟಿಗೆಂದು ಕೊಡುವ 2,000 ರೂ. ಹಣವನ್ನು ಸರ್ಕಾರ ಇಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.