ಮೈಸೂರು: ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಸಿಟ್ಟಿಗೆದ್ದ ಪತಿ ಮಗನ ಎದುರಲ್ಲೇ ಆಕೆಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದದ ಧಾರುಣ ಘಟನೆ ಮೈಸೂರಿನ ಎಚ್ ಡಿ ಕೋಟೆ ತಾಲೂಕಿನ ಹನುಮಂತನಗರದಲ್ಲಿ ನಡೆದಿದೆ.
ಮಧುರ ಎಂಬ ಯುವತಿ ಪತಿಯ ಕ್ರೌರ್ಯಕ್ಕೆ ಒಳಗಾದವಳು. ಇದೀಗ ಆಕೆ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಈಕೆಯ ಮೇಲೆ ಪತಿ ನಿರಂತರವಾಗಿ ಹಿಂಸೆ ಮಾಡುತ್ತಲೇ ಇದ್ದ ಎಂದು ಈಗ ಕುಟುಂಬಸ್ಥರು ಆರಂಭಿಸಿದ್ದಾರೆ. ಪತಿ ಮಲ್ಲೇಶ್ ನಾಯ್ಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಆರೇಳು ವರ್ಷಗಳಿಂದ ಮಲ್ಲೇಶ್ ನಾಯ್ಕ್ ನಿರಂತರವಾಗಿ ಆಕೆಗೆ ಕಿರುಕುಳ ನೀಡುತ್ತಿದ್ದ. ಆಕೆಯನ್ನು ಅನುಮಾನದಿಂದ ನೋಡುತ್ತಿದ್ದುದಲ್ಲದೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ತವರು ಮನೆಯಿಂದ ಹಣ, ಸೈಟು ಕೊಡಿಸುವಂತೆ ಪೀಡಿಸುತ್ತಿದ್ದ.
ಇತ್ತೀಚೆಗಷ್ಟೇ ಮಧುರಾ ಎರಡು ದಿನಗಳ ಮಟ್ಟಿಗೆ ತವರಿಗೆ ಹೋಗಿ ಬಂದಿದ್ದಳು. ಅದನ್ನೇ ನೆಪ ತೆಗೆದು ಜಗಳ ತೆಗೆದಿದ್ದಾನೆ. ಕೊನೆಗೆ ಮಗನ ಎದುರೇ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಮಧುರಾ ತೀವ್ರ ಗಾಯಗೊಂಡಿದ್ದಾಳೆ. ಇದೀಗ ಗಂಭೀರ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧುರಾ ತವರು ಮನೆಯವರು ಅಳಿಯ ಮಲ್ಲೇಶ್ ನಾಯ್ಕ್ ವಿರುದ್ಧ ದೂರು ನೀಡಿದ್ದಾರೆ. ಮಗಳ ಮೇಲೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದ. ನಮ್ಮ ಮಗಳು ಒಂದು ದಿನವೂ ಸಂತೋಷವಾಗಿರಲಿಲ್ಲ ಎಂದು ದೂರಿದ್ದಾರೆ.