ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆಂದು ಹೀಗೆ ಬಂದು ಹೋದ ಸಿಎಂ ಸಿದ್ದರಾಮಯ್ಯ ಬಂದಷ್ಟೇ ವೇಗವಾಗಿ ತೆರಳಿದ್ದಾರೆ.
ಇಂದು ತಮ್ಮ ಸರ್ಕಾರೀ ವಾಹನ, ಬೆಂಗಾವಲು ಪಡೆ ಬಿಟ್ಟು ಖಾಸಗಿ ಕಾರಿನಲ್ಲಿ ವಿಚಾರಣೆಗೆ ಬಂದ ಸಿದ್ದರಾಮಯ್ಯರನ್ನು ಲೋಕಾಯುಕ್ತ ಅಧಿಕಾರಿಗಳು ಕೇವಲ ಒಂದೂವರೆ ಗಂಟೆ ವಿಚಾರಣೆ ನಡೆಸಿದ್ದಾರೆ. ಇಂದು ಪ್ರಾಥಮಿಕ ವಿಚಾರಣೆಯನ್ನಷ್ಟೇ ಮಾಡಿದ್ದಾರೆ ಎನ್ನಲಾಗಿದೆ.
ಮೊದಲೇ ಸಿದ್ಧಪಡಿಸಿದ ಕೆಲವೊಂದು ಪ್ರಶ್ನೆಗಳನ್ನು ಸಿಎಂಗೆ ಕೇಳಲಾಗಿದೆ. ಒಂದು ವೇಳೆ ಈ ಪ್ರಶ್ನೆಗಳಿಗೆ ಸಿಎಂ ನೀಡಿದ ಉತ್ತರ ಸಮಂಜಸವಾಗಿಲ್ಲ ಎಂದು ಅಧಿಕಾರಿಗಳಿಗೆ ಅನಿಸಿದರೆ ಮತ್ತೊಮ್ಮೆ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ವಿಚಾರಣೆ ಬಳಿಕ ಮೈಸೂರಿನ ಅತಿಥಿ ಗೃಹಕ್ಕೆ ತೆರಳಿದ್ದಾರೆ.
ಇಷ್ಟು ಬೇಗ ವಿಚಾರಣೆ ಮುಗಿಸಿರುವುದಕ್ಕೆ ವಿಪಕ್ಷಗಳಿಂದ ಟೀಕೆ ಬರುವುದು ಪಕ್ಕಾ. ಈಗಾಗಲೇ ಬಿಜೆಪಿ ನಾಯಕರು ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ಅಧೀನದಲ್ಲೇ ಇದೆ. ಹೀಗಿರುವಾಗ ಸಿಎಂ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ವಾದಿಸುತ್ತೇ ಇದೆ. ಇದೀಗ ಕೆಲವೇ ಹೊತ್ತಿನ ವಿಚಾರಣೆ ನಡೆಸಿರುವುದಕ್ಕೆ ಟೀಕೆಗಳು ಎದುರಾಗಲಿದೆ.