ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮುಡಾ ಸೈಟು ಹಗರಣಕ್ಕೆ ಸಂಬಂಧಿಸಿದಂತೆ ಇಂದು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲಿದ್ದಾರೆ. ಇಂದು ಸಿದ್ದರಾಮಯ್ಯ ವಿಚಾರಣೆಗೆ ನೋಟಿಸ್ ನೀಡಲಾಗಿದೆ.
ಮುಡಾದಿಂದ ತಮ್ಮ ಅಧಿಕಾರ ಬಳಸಿ ಅಕ್ರಮವಾಗಿ ಪತ್ನಿ ಹೆಸರಿನಲ್ಲಿ 14 ಸೈಟುಗಳನ್ನು ಸಿದ್ದರಾಮಯ್ಯ ಪಡೆದುಕೊಂಡಿದ್ದಾರೆ ಎಂಬುದು ಅವರ ಮೇಲಿನ ಆರೋಪವಾಗಿದೆ. ಈ ಸಂಬಂಧ ಅವರ ಪತ್ನಿ ಪಾರ್ವತಿ, ಬಾಮೈದನನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಇದೀಗ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯರನ್ನು ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಅದರಂತೆ ಇಂದು ಅವರು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಮಾಡಿರುವ ಪ್ರಕರಣ ಸಂಬಂಧ ಪೊಲೀಸ್ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಈ ಬಗ್ಗೆ ನಿನ್ನೆ ಶಿಗ್ಗಾಂವಿಯಲ್ಲಿ ಮಾತನಾಡಿದ್ದ ಅವರು ಎಂಥಾ ಪರಿಸ್ಥಿತಿ ಬಂದಿದೆ ನೋಡಿ, ನನ್ನ ಇಡೀ ಕುಟುಂಬದ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಒಂದು ಸುಳ್ಳು ಕೇಸ್ ವಿಚಾರಣೆಗಾಗಿ ನಾನು ನನ್ನ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ ಎಂದಿದ್ದರು.