ಮೈಸೂರು: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಬರುವಾಗ ಸರ್ಕಾರೀ ಕಾರಿನಲ್ಲಿ ಬರಲು ಯೋಜನೆ ರೂಪಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಖಾಸಗಿ ವಾಹನದಲ್ಲಿ ಬಂದರು.
ಮೊದಲು ತಮ್ಮ ಬೆಂಗಾವಲು ಪಡೆಯೊಂದಿಗೆ ಸರ್ಕಾರೀ ಕಾರಿನಲ್ಲೇ ಮೈಸೂರಿಗೆ ಬರಲು ಸಿದ್ದರಾಮಯ್ಯ ಯೋಜನೆ ರೂಪಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ತಮ್ಮ ಯೋಜನೆ ಬದಲಾಯಿಸಿ ಖಾಸಗಿ ಕಾರಿನಲ್ಲಿ ಲೋಕಾಯುಕ್ತ ಕಚೇರಿಗೆ ಬಂದರು. ಜೊತೆಗೆ ತಮ್ಮ ಬೆಂಗಾವಲು ಪಡೆಯನ್ನೂ ಕರೆತಂದಿಲ್ಲ.
ಮೈಸೂರಿಗೆ ಇಂದು ಸಿದ್ದರಾಮಯ್ಯ ಬಂದಿರುವುದು ಆರೋಪಿಯಾಗಿ. ವಿಚಾರಣೆ ಪ್ರಯುಕ್ತ ಬರುವಾಗ ಸರ್ಕಾರೀ ಕಾರಿನಲ್ಲಿ ಬಂದರೆ ಅದನ್ನೂ ವಿಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಇದು ಉಪಚುನಾವಣೆ ಹೊಸ್ತಿಲಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಅವರು ಸರ್ಕಾರೀ ಕಾರನ್ನು ಬಿಟ್ಟು ಖಾಸಗಿ ಕಾರಿನಲ್ಲಿ ಬಂದಿದ್ದರು.