Publish Date: Mon, 11 Apr 2022 (09:34 IST)
Updated Date: Mon, 11 Apr 2022 (09:37 IST)
ನಂಜನಗೂಡು : ಶೌಚಾಲಯ ಬಳಸಿದ ಎಂಬ ಕಾರಣಕ್ಕೆ ಅಣ್ಣನೇ ತಮ್ಮನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಲ್ಲಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಗೋವಿಂದನಾಯಕ (36) ಕೊಲೆಯಾದ ವ್ಯಕ್ತಿ. ಈತನ ಸಹೋದರ ರಂಗಸ್ವಾಮಿ ನಾಯಕ (46) ಕೊಲೆ ಮಾಡಿದ ಆರೋಪಿ. ಕೆಲಸಕ್ಕೆ ಹೋಗದೆ ಯಾವಾಗಲೂ ಮನೆಯಲ್ಲಿ ಇರುತ್ತಿದ್ದ ಗೋವಿಂದನಾಯಕನನ್ನು ಆತನ ತಾಯಿಯೇ ಕೂಲಿ ಮಾಡಿ ಸಾಕುತ್ತಿದ್ದರು.
ಇದೇ ವಿಷಯಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೆ ಮನೆಯಲ್ಲಿ ನಿರ್ಮಿಸಿರುವ ಶೌಚಾಲಯ ಬಳಸದಂತೆ ರಂಗಸ್ವಾಮಿ ನಾಯಕ ಎಚ್ಚರಿಕೆ ನೀಡಿದ್ದ. ಅನೇಕ ಬಾರಿ ಬೀಗ ಹಾಕಿದ್ದರೂ, ಅದನ್ನು ತೆಗೆದು ಶೌಚಾಲಯ ಬಳಸುತ್ತಿದ್ದ.
ಅದರಂತೆ ಭಾನುವಾರ ಕೂಡ ಗೋವಿಂದನಾಯಕ ಶೌಚಾಲಯ ಬಳಸಿದ್ದಾನೆ. ಈ ವೇಳೆ ಮನೆಯಲ್ಲಿಯೇ ಇದ್ದ ರಂಗಸ್ವಾಮಿ ನಾಯಕ ಪ್ರಶ್ನಿಸಿ ಜಗಳ ತೆಗೆದಿದ್ದಾನೆ.
ಈ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯುವ ವೇಳೆ ರಂಗಸ್ವಾಮಿ ನಾಯಕ ಮಚ್ಚಿನಿಂದ ಕೊಚ್ಚಿ ತಮ್ಮನನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ಕೌವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಐ ಮಹೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ.