Select Your Language

Notifications

webdunia
webdunia
webdunia
webdunia

Ballari: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು, ಜಿಲ್ಲೆಯತ್ತ ತಲೆಯೂ ಹಾಕದ ಸಚಿವ ಜಮೀರ್ ಅಹ್ಮದ್

Zameer Ahmed Khan

Krishnaveni K

ಬಳ್ಳಾರಿ , ಗುರುವಾರ, 28 ನವೆಂಬರ್ 2024 (10:28 IST)
ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಐವರು ಬಾಣಂತಿಯರ ಸಾವಾಗಿದೆ. ಕಳೆದ ಒಂದು ವಾರದ ಅವಧಿಯಲ್ಲೇ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಹಾಗಿದ್ದರೂ ಉಸ್ತುವಾರಿ ಸಚಿವರಾಗಿರುವ ಜಮೀರ್ ಅಹ್ಮದ್ ಇತ್ತ ತಲೆಯೂ ಹಾಕಿಲ್ಲ.

ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳು ಈಗ ಗರ್ಭಿಣಿಯರ ಪಾಲಿಗೆ ಮರಣ ಕೂಪವಾಗಿದೆ. ಬಾಣಂತಿಯರ ಸರಣಿ ಸಾವು ಜನರನ್ನು ಬೆಚ್ಚಿ ಬೀಳಿಸಿದೆ. ಸತತವಾಗಿ ಬಾಣಂತಿಯರ ಸಾವಾಗಿದ್ದರೂ ಯಾರೂ ಈ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಈ ಹಿಂದೆ ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ಮುಳುಗಿದ್ದರು. ಈ ವೇಳೆ ಬಳ್ಳಾರಿ ಬಾಣಂತಿಯರ ಪ್ರಕರಣದ ಬಗ್ಗೆ ಕೇಳಿದಾಗ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದಿದ್ದರು. ಆದರೆ ಚುನಾವಣೆ ಮುಗಿದರೂ ಇತ್ತ ತಲೆ ಹಾಕಿಲ್ಲ.

ಇದರ ಬಗ್ಗೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಾಣಂತಿಯರ ಸಾವಿಗೆ ಇಲ್ಲ ಸಲ್ಲದ ನೆಪ ಹೇಳಿ ವೈದ್ಯರು ಜಾರಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತಗಳಾದರೂ ಜಿಲ್ಲಾ ಉಸ್ತುವಾರಿ ಸಚಿವರು ಬರುತ್ತಿಲ್ಲ. ಕೇವಲ ಚುನಾವಣೆಗೆ ಓಟು ಕೇಳಲು ಮಾತ್ರ ಬರುತ್ತಾರೆ. ಇಂತಹ ಪ್ರಕರಣವಾದಾಗ ಅದನ್ನು ಗಂಭೀರವಾಗಿ ಪರಿಗಣಿಸಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

ನಿನ್ನೆಯಷ್ಟೇ ಬಿಮ್ಸ್ ಆಸ್ಪತ್ರೆಯಲ್ಲಿ ಓರ್ವ ಬಾಣಂತಿ ಸಾವನ್ನಪ್ಪಿದ್ದಾಳೆ. ರವಿವಾರ ಆಸ್ಪತ್ರೆಗೆ ದಾಖಲಾಗಿದ್ದ ಮಹಾಲಕ್ಷ್ಮಿ ಎಂಬ 20 ವರ್ಷದ ಬಾಣಂತಿಗೆ ನಾರ್ಮಲ್ ಹೆರಿಗೆಯಾಗಿತ್ತು. ಆದರೆ ತೀವ್ರ ರಕ್ತ ಸ್ರಾವ ಮತ್ತು ನಂಜಿನಿಂದ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ವೈದ್ಯರನ್ನು ಕೇಳಿದರೆ ಮಹಾಲಕ್ಷ್ಮಿಗೆ ಅನಿಮಿಯಾ ಇತ್ತು. ಹೀಗಾಗಿ ರಕ್ತಸ್ರಾವ ನಿಂತಿಲ್ಲ. ಹೆರಿಗೆಯಾಗುವ ಮೊದಲೇ ಸಂಬಂಧಿಕರಿಗೆ ಸಮಸ್ಯೆಯಾಗಬಹುದು ಎಂದು ಎಚ್ಚರಿಕೆ ನೀಡಿದ್ದೆವು. ಅದಲ್ಲದೇ ಬೇರೆ ಖಾಯಿಲೆಗಳೂ ಇದ್ದಿದ್ದರಿಂದ ಸಾವಾಗಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ಮಹಾಲಕ್ಷ್ಮಿ ಕುಟುಂಬದವರು ಮಾತ್ರ ಮೊದಲು ಬೇರೆ ಆಸ್ಪತ್ರೆಗೆ ತೋರಿಸಿದ್ದೆವು. ಎಲ್ಲವೂ ನಾರ್ಮಲ್ ಆಗಿತ್ತು. ತೀವ್ರ ರಕ್ತಸ್ರಾವ ಆಗಿದೆ. 18 ಬಾಟಲ್ ರಕ್ತ ನೀಡಿದ್ದೆವು. ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದಲೇ ಸಾವಾಗಿದೆ ಎಂದು ಆರೋಪಿಸಿದ್ದಾರೆ. ಇಷ್ಟೆಲ್ಲಾ ಅವಾಂತರಗಳಾಗುತ್ತಿದ್ದರೂ ಜನಪ್ರತಿನಿಧಿಗಳು ತಲೆಯೇ ಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ವಿಪರೀತ ಶೈತ್ಯ ಹವೆ: ಮಕ್ಕಳ ಆರೋಗ್ಯದ ಬಗ್ಗೆ ಈ ಎಚ್ಚರಿಕೆ ವಹಿಸಿ