ಬೆಂಗಳೂರು: ವಕ್ಫ್ ನೋಟಿಸ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವ ಬಿಜೆಪಿ ವಿರುದ್ಧ ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ಆಸ್ತಿ ವಕ್ಫ್ ನದ್ದಾದರೆ ವಕ್ಫ್ ನದ್ದು, ಜನರದ್ದಾದರೆ ಜನರದ್ದು ಅದರಲ್ಲಿ ಗೊಂದಲವಿಲ್ಲ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಧು ಬಂಗಾರಪ್ಪ ರೀ. ವಕ್ಫ್ ನದ್ದಾದರೆ ವಕ್ಫ್ ನದ್ದು, ಜನರ ಆಸ್ತಿಯಾಗಿದ್ದರೆ ಅವರಿಗೆ ಸೇರುತ್ತೆ. ಇವರದ್ದು ಆದರೆ ಇವರಿಗೆ ಅವರದ್ದು ಆದರೆ ಅವರಿಗೆ. ಯಾವು ಯಾವುದೋ ಜಮೀನನ್ನು ವಕ್ಫ್ ನದ್ದು ಎಂದು ಹೇಳಕ್ಕೆ ಬರಲ್ಲ. ಕಾನೂನಿಲ್ವಾ, ದಾಖಲೆಗಳಿಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.
ವಕ್ಫ್ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಇದೆಲ್ಲಾ ಬಿಜೆಪಿಯವರು ಚುನಾವಣೆ ಸಮಯದಲ್ಲಿ ಒಂದೊಂದು ವಿಷಯ ಇಟ್ಟುಕೊಂಡು ವಿವಾದವೆಬ್ಬಿಸುತ್ತಿರುವುದಷ್ಟೇ. ವಕ್ಫ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಯಾರೂ ಬೇರೆಯವರ ಆಸ್ತಿಯನ್ನು ಕಬಳಿಕೆ ಮಾಡಿಲ್ಲ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಅದೇ ರೀತಿ ಬಿಜೆಪಿಯವರು ಮಾಡ್ತಿದ್ದಾರೆ. ಮಾಡಿಕೊಳ್ಳಲಿ ಬಿಡಿ ಪಾಪ. ಹಳ್ಳಿ ಹಳ್ಳಿಗೆ ಹೋಗಿ ಪ್ರತಿಭಟನೆ ಮಾಡಲಿ. ಯಾಕೆ ಮಾಡಲ್ಲ? ಬೆಂಗಳೂರಿನಲ್ಲಿ ಮಾತ್ರ ಯಾಕೆ ಮಾಡ್ತಾರೆ? ಇಲ್ಲಿ ಪಬ್ಲಿಸಿಟಿ ಜಾಸ್ತಿ ಸಿಗುತ್ತೆ ಅಂತಾನಾ? ಎಂದು ಮಧು ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ.