ಬೆಂಗಳೂರು: ರಾಜ್ಯದಲ್ಲಿ ವಕ್ಫ್ ವಿವಾದ ಕಾವೇರಿರುವ ಬೆನ್ನಲ್ಲೇ ವಕ್ಫ್ ಮಂಡಳಿಯ ಅಧಿಕಾರವೊಂದಕ್ಕೆ ಕರ್ನಾಟಕ ಹೈಕೋರ್ಟ್ ಕತ್ತರಿ ಹಾಕಿದ್ದು, ಅಧಿಕಾರ ಕೊಟ್ಟವರಿಗೂ ಚಾಟಿ ಬೀಸಿದೆ.
ವಕ್ಫ್ ಮಂಡಳಿ ಇದುವರೆಗೆ ವಿವಾಹಿತ ಮುಸ್ಲಿಂ ದಂಪತಿಗಳಿಗೆ ವಿವಾಹ ನೋಂದಣಿ ಪತ್ರ ನೀಡುತ್ತಿತ್ತು. ರಾಜ್ಯ ಅಲ್ಪ ಸಂಖ್ಯಾತರ ಇಲಾಖೆಯ ಸೂಚನೆ ಮೇರೆಗೆ ಈ ಪರಮಾಧಿಕಾರ ಹೊಂದಿತ್ತು ಎನ್ನಲಾಗಿದೆ. ಆದರೆ ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಇದರ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಕ್ಫ್ ಮಂಡಳಿಗೆ ಈ ಅಧಿಕಾರವನ್ನು ಕೊಟ್ಟವರು ಯಾರು ಎಂದು ತಪರಾಕಿ ನೀಡಿತ್ತು. ಇದೀಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಕ್ಫ್ ಮಂಡಳಿ ಅಧಿಕಾರಕ್ಕೆ ಕತ್ತರಿ ಹಾಕಿದೆ. ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ವಿಧಿಸಿದೆ.
ನ್ಯಾಯಾಲಯದ ಮುಂದಿನ ಆದೇಶದವರೆಗೂ ರಾಜ್ಯ ಸರ್ಕಾರದ ಆದೇಶವನ್ನು ಅಮಾನತಿನಲ್ಲಿಡಬೇಕು. ಯಾವುದೇ ಅಧಿಕಾರ ಇಲ್ಲದೇ ವಕ್ಫ್ ಮಂಡಳಿ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸಬಾರದು. ವಕ್ಫ್ ಕಾಯ್ದೆ 1995 ರ ಪ್ರಕಾರ ಅನ್ವಯ ವಕ್ಫ್ ಮಂಡಳಿಗೆ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವುದು ಮಾತ್ರ ವಕ್ಫ್ ಕಾರ್ಯವ್ಯಾಪ್ತಿಯಾಗಿದೆ. ಅದರ ಹೊರತಾಗಿ ವಿವಾಹ ಪ್ರಮಾಣ ಪತ್ರ ನೀಡುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿದೆ.