Select Your Language

Notifications

webdunia
webdunia
webdunia
webdunia

ಬಿಪಿಎಲ್ ಕಾರ್ಡ್ ವಿವಾದ, ಶಪಥ ಮಾಡಿದ ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (09:35 IST)
ಬೆಂಗಳೂರು: ಬಿಪಿಎಲ್ ಕಾರ್ಡ್ ರೂಪಿಸಿರುವುದೇ ಬಡವರಿಗಾಗಿ. ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಉಚಿತ ಯೋಜನೆ ಜಾರಿಗೆ ತಂದವರೇ ನಾವು. ಈಗ ಬಿಜೆಪಿಯವರು ಹೇಳಿದ ತಕ್ಷಣ ಟೀಕೆಗಳು ನಿಜವಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಶಪಥ ಮಾಡಿದ್ದಾರೆ.

ಕರ್ನಾಟಕದಲ್ಲಿ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟಿದ್ದು ಸಿದ್ದರಾಮಯ್ಯನ ಸರ್ಕಾರ. 7 ರಿಂದ 5 ಕೆ.ಜಿಗೆ ಇಳಿಸಿದ್ದು ಬಿ.ಎಸ್.ಯಡಿಯೂರಪ್ಪ. ಆರ್.ಅಶೋಕ್ ಅವರ ಸಚಿವ ಸಂಪುಟದಲ್ಲಿದ್ದರು. 2 ಕೆ.ಜಿಯನ್ನು ಕಡಿಮೆ ಮಾಡಿದಾಗ ಯಾಕೆ ಉಸಿರೆತ್ತಲಿಲ್ಲ. ಆಹಾರ ಭದ್ರತಾ ಕಾಯ್ದೆಯನ್ನು ವಿರೋಧಿಸಿದ ಬಿಜೆಪಿ ಬಡವರ ಬಗ್ಗೆ ಮಾತನಾಡುತ್ತಾರೆ. ಆಹಾರ ಪದಾರ್ಥಗಳನ್ನು ಉಚಿತವಾಗಿ ಕೊಡಬೇಕೆಂದು ಯೋಜನೆ ಜಾರಿಗೆ ತಂದಿದ್ದು ನಾವು. ಸರ್ಕಾರಿ ನೌಕರರು, ತೆರಿಗೆದಾರರಿಗೆ ಬಿಪಿಎಲ್ ಕಾರ್ಡು ಕೊಡಬಾರದು ಎಂದು ಹೇಳಿದ್ದೇವೆ. ಈ ಯೋಜನೆ ಮಾಡಿರುವುದು ಬಡವರಿಗಾಗಿ. ಸರ್ಕಾರಿ ನೌಕರರು ಬಿಪಿಎಲ್ ಗೆ ಅರ್ಹರೇ? ಎಂದು ಪ್ರಶ್ನಿಸಿದರು. ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾಡಿದ್ದಾರಾ? ಎಸ್.ಸಿ.ಎಸ್.ಪಿ/ಟಿಎಸ್.ಪಿ ಕಾಯ್ದೆಯನ್ನು ಎಲ್ಲಿಯಾದರೂ ಜಾರಿಗೆ ತಂದಿದ್ದಾರೆಯೇ? ಬಿಜೆಪಿಗೆ ಬಡವರ ಕುರಿತು ಯಾವ ಕಾಳಜಿಯೂ ಇಲ್ಲ ಎಂದರು.

ಬಿಜೆಪಿ ಬಳಿ  ಸಾಲ ಕೇಳಿಲ್ಲ
ಗ್ಯಾರಂಟಿಗಳಿಗೆ ದುಡ್ಡಿಲ್ಲ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಮಾತನಾಡಿ ನಾವು ಹಣವಿಲ್ಲ ಎಂದು ಬಿಜೆಪಿ ಬಳಿ  ಸಾಲ ಕೇಳಿಲ್ಲ. ಯಾವುದಕ್ಕೆ ಹಣವಿಲ್ಲ ಎಂದು ತಿಳಿಸಿ ಎಂದು ಪ್ರಶ್ನಿಸಿದರು. ರಾಜಕೀಯವಾಗಿ ಮಾತನಾಡುತ್ತಾರೆ ಅಷ್ಟೇ ಎಂದರು.
ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಉಚಿತವಾಗಿ ಓಡಾಟ ಮಾಡಬಹುದು ಎಂದು ಹೇಳಿದ್ದರು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಾವು ಯಾರಿಗೂ ತಾರತಮ್ಯ ಮಾಡಿಲ್ಲ. ಅಶೋಕ್ ಅವರ ಪತ್ನಿಯೂ ಓಡಾಡಬಹುದು ಎಂದರು.

1 ಲಕ್ಷದ 20 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ
ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತಂದ ಮೇಲೆ ವಿವಿಧ ಯೋಜನೆಗಳಿಗೆ ಅನುದಾನ ಕಡಿಮೆಯಾಗಿದೆ ಎಂಬ ಬಗ್ಗೆ ಮಾತನಾಡಿ ಯಾವುದಕ್ಕೆ ಕಡಿಮೆಯಾಗಿದೆ ಎಂದರು. 1 ಲಕ್ಷದ 20 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿಗಳಿಗಾಗಿ ಮೀಸಲಿಡಲಾಗಿದೆ. ಅವರಿಗಿಂತ ಹೆಚ್ಚು ಅನುದಾನವನ್ನು  ಮೀಸಲಿಡಲಾಗಿದೆ ಎಂದರು. ಕಾಂಗ್ರೆಸ್ ಶಾಸಕರೇ  ಈ ಬಗ್ಗೆ ಮಾತನಾಡಿರುವ ಕುರಿತು ಪ್ರತಿಕ್ರಿಯೆ  ನೀಡಿದ ಮುಖ್ಯಮಂತ್ರಿಗಳು ಶಾಸಕರು ವಿಶೇಷ ಅನುದಾನವನ್ನು ಕೇಳುತ್ತಿದ್ದಾರೆ. ಬಜೆಟ್ ಬಿಟ್ಟು ಕೇಳುತ್ತಿರುವುದನ್ನೂ ಕೊಟ್ಟಿದ್ದೇವೆ ಅವರು ಕೇಳಿದಷ್ಟು ಕೊಡಲು ಸಾಧ್ಯವಾಗದೇ ಇರಬಹುದು ಎಂದರು.

ಬಿಜೆಪಿ ಭರವಸೆ ನೀಡಿದ್ದ 10% ರಷ್ಟನ್ನೂ ಈಡೇರಿಸಿಲ್ಲ
ಬಿಜೆಪಿ ಮೂರು ವರ್ಷಗಳ ಅಧಿಕಾರದಲ್ಲಿದ್ದು ಏನೇನು ಮಾಡಿದ್ದಾರೆ ? 2018 ರಲ್ಲಿ 600 ಭರವಸೆ ನೀಡಿ ಅದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ? 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇವೆ ಎಂದು ಮೊದಲನೇ ಸಚಿವ ಸಂಪುಟದಲ್ಲಿಯೇ ಹೇಳಿದ್ದರು ಮಾಡಿದ್ದಾರಾ? ಎಂದು ಪ್ರಶ್ನಿಸಿದರು.  10% ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ. ರಾಜಕಾರಣಕ್ಕಾಗಿ ಹೇಳುತ್ತಿದ್ದಾರೆ ಎಂದರು.

ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ
ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆಯ ನಂತರ  ನಿಲ್ಲಿಸುತ್ತಾರೆ, ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು, ಆಗಿದೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಬಿಜೆಪಿಯವರು ರಾಜಕೀಯಕ್ಕಾಗಿ ಪರಿಷ್ಕರಣೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿಗಳು ಶಕ್ತಿ ಯೋಜನೆಯ ಪರಿಷ್ಕರಣೆ ಮಾಡುವುದಾಗಿ ಹೇಳಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಶಕ್ತಿ ಯೋಜನೆಯಡಿ 325 ಕೋಟಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಅದರಲ್ಲಿ ಬಿಜೆಪಿಯವರು, ಎಲ್ಲಾ ಧರ್ಮದವರು, ಜಾರಿಯವರೂ ಸೇರಿದ್ದಾರೆ ಎಂದರು.

ಉಪಚುನಾವಣೆ: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್  ಗೆಲ್ಲಲಿದೆ
ಚುನಾವಣೋತ್ತರ ಸಮೀಕ್ಷೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಹರಿಯಾಣದಲ್ಲಿ ಎಕ್ಸಿಟ್  ಪೋಲ್ ಏನಾಯ್ತು. ಅದನ್ನು ನಂಬಲು ಸಾಧ್ಯವಿಲ್ಲ. ಉಪಚುನಾವಣೆಯಲ್ಲಿ ನನಗಿರುವ ಮಾಹಿತಿಯ ಪ್ರಕಾರ ನಾವು ಎಲ್ಲಾ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮಾಧವಿ ಬುಚ್ ಹುದ್ದೆಯಿಂದ ತೆಗೆದು ಹಾಕಿ ಅದಾನಿಯನ್ನು ಬಂಧಿಸಿ: ರಾಹುಲ್ ಗಾಂಧಿ