ಬೆಂಗಳೂರು: ಕರ್ನಾಟಕದಲ್ಲಿ ನಾಳೆ ಉಪಚುನಾವಣೆ ಫಲಿತಾಂಶ ಬರಲಿದ್ದು, ಈ ಫಲಿತಾಂಶದ ಬಳಿಕ 7 ರಿಂದ 8 ಸಚಿವರಿಗೆ ಕೊಕ್ ನೀಡಲಾಗುತ್ತದೆ ಎಂಬ ಸುದ್ದಿ ದಟ್ಟವಾಗಿದೆ. ಅದರಲ್ಲೂ ಈ ಸಚಿವರ ತಲೆದಂಡವಂತೂ ಫಿಕ್ಸ್ ಎನ್ನಲಾಗಿದೆ.
ಕರ್ನಾಟಕದಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ನಾಳೆ ಫಲಿತಾಂಶ ಪ್ರಕಟವಾಗಲಿದೆ. ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಎರಡು ಎನ್ ಡಿಎ ಮತ್ತು ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲ್ಲಬಹುದು ಎನ್ನಲಾಗಿದೆ. ಅದರಂತೆ ಸಂಡೂರು ಕಾಂಗ್ರೆಸ್ ಪಾಲಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಉಪಚುನಾವಣೆ ಫಲಿತಾಂಶ ಬಳಿಕ ರಾಜ್ಯ ಸರ್ಕಾರದ ಸಚಿವರಲ್ಲೂ ಬದಲಾವಣೆಗಳಾಗಲಿವೆ. 7 ರಿಂದ 8 ಸಚಿವರ ಬದಲಾವಣೆಯಾಗಲಿದೆ ಎಂಬ ಸುದ್ದಿಗಳಿವೆ. ಅದರಲ್ಲೂ ಅಬಕಾರೀ ಸಚಿವರಾಗಿರುವ ಆರ್ ಬಿ ತಿಮ್ಮಾಪುರಗೆ ಕೊಕ್ ಕೊಡುವುದು ಖಚಿತ ಎನ್ನಲಾಗಿದೆ.
ಅಬಕಾರಿ ಇಲಾಖೆಯಲ್ಲಿ ಸಾಕಷ್ಟು ಅಕ್ರಮವಾಗಿರುವ ಬಗ್ಗೆ ಸರ್ಕಾರ ಟೀಕೆಗೆ ಗುರಿಯಾಗಿದೆ. ಈ ಕಾರಣಕ್ಕೆ ತಿಮ್ಮಾಪುರ ತಲೆದಂಡವಾಗಲಿದೆ ಎನ್ನಲಾಗಿದೆ. ಅವರ ಬದಲಿಗೆ ವಾಲ್ಮೀಕಿ ಹಗರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಾಗೇಂದ್ರ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಒಟ್ಟಿನಲ್ಲಿ ಈ ಉಪಚುನಾವಣೆ ಬಳಿಕ ಸರ್ಕಾರದಲ್ಲಿ ಬದಲಾವಣೆ ಖಚಿತವಾಗಿದೆ.