ಬೆಂಗಳೂರು: ಬಾಯಾರಿಕೆಯಾಗುತ್ತಿದೆಯೆಂದು ಎಲ್ಲೆಂದರಲ್ಲಿ ನೀರು ಬಾಟಲಿ ಖರೀದಿ ಮಾಡುವ ಮುನ್ನ ಈ ವರದಿ ನೋಡಿ. ಆಹಾರ ಗುಣಮಟ್ಟ ಸುರಕ್ಷತಾ ವಿಭಾಗದ ವರದಿ ಪ್ರಕಾರ ಹಲವು ನೀರಿನ ಬಾಟಲಿಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ.
ಇತ್ತೀಚೆಗೆ ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ ಗೋಬಿ ಮಂಚೂರಿ, ತುಪ್ಪ, ಕೇಕ್, ಬಟಾಣಿ ಸೇರಿದಂತೆ ಹಲವು ಆಹಾರ ವಸ್ತುಗಳ ಗುಣಮಟ್ಟ ಪರೀಕ್ಷಿಸಿ ಹಾನಿಕಾರಕ ಅಂಶವಿರುವುದಾಗಿ ವರದಿ ನೀಡಿತ್ತು. ಕೆಲವು ಆಹಾರ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಅಪಾಯವಿದೆ ಎಂದು ಎಚ್ಚರಿಕೆ ನೀಡಿತ್ತು.
ಅದರ ಬೆನ್ನಲ್ಲೇ ನೀರಿನ ಗುಣಮಟ್ಟ ಪರೀಕ್ಷೆಯನ್ನೂ ನೀಡಲಾಗಿದೆ. ಸುಮಾರು 160 ಮಿನರಲ್ ವಾಟರ್ ಬಾಟಲಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಶೇ.50 ರಷ್ಟು ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ.
ಈ ನೀರಿನಲ್ಲಿ ಬಹಳ ದಿನಗಳಿಂದ ಶೇಖರಿಸಿಟ್ಟಿರುವ ಕಾರಣಕ್ಕೆ ಪಾಚಿಯ ಅಂಶ ಪತ್ತೆಯಾಗಿದೆ. ಇನ್ನು, ಕೆಲವು ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು ಇದು ವಾಂತಿ, ಬೇಧಿ, ಕರುಳಿನ ಸಂಬಂಧ ರೋಗಗಳಿಗೆ ಕಾರಣವಾಗಬಹುದಾಗಿದೆ. ಅಲ್ಲದೆ ಕೆಲವೊಂದನ್ನು ಬೋರ್ ವೆಲ್ ನೀರನ್ನು ಶುದ್ಧೀಕರಿಸದೇ ಹಾಗೆಯೇ ಬಾಟಲಿಗಳಿಗೆ ತುಂಬಿ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.