ಬೆಂಗಳೂರು: ಆಹಾರ ಕಲಬೆರಕೆ ಎನ್ನುವುದು ಇತ್ತೀಚೆಗೆ ವ್ಯಾಪಕವಾಗಿದ್ದು, ಯಾವುದೇ ಆಹಾರ ಸೇವನೆ ಮಾಡುವ ಮೊದಲು ಯೋಚನೆ ಮಾಡಬೇಕಾದ ಪರಿಸ್ಥಿತಿಯಾಗಿದೆ. ಕರ್ನಾಟಕದಲ್ಲಿ ಕಳಪೆ ಗುಣಮಟ್ಟದ ಉಪ್ಪು ಮಾರಾಟವಾಗುವ ಅಂಶ ಬೆಳಕಿಗೆ ಬಂದಿದೆ.
ಉಪ್ಪು ಸಾಮಾನ್ಯವಾಗಿ ಎಲ್ಲಾ ಅಡುಗೆಗೆ ಬಳಕೆಯಾಗುವ ಸರ್ವೇ ಸಾಮಾನ್ಯ ವಸ್ತು. ಆದರೆ ಈಗ ಕಲಬೆರಕೆಯಾದ ಕಳಪೆ ಗುಣಮಟ್ಟದ ಉಪ್ಪು ಮಾರಾಟವಾಗುತ್ತಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಬಹಿರಂಗಪಡಿಸಿದೆ. ಈಗಾಗಲೇ ಆಹಾರ ಸುರಕ್ಷತಾ ಇಲಾಖೆ ಹಲವು ಆಹಾರ ವಸ್ತುಗಳನ್ನು ಪರೀಕ್ಷೆಗೊಳಪಡಿಸಿ ಹಾನಿಕಾರಕ ಅಂಶ ಪತ್ತೆ ಹಚ್ಚಿತ್ತು. ಈಗ ಉಪ್ಪಿನ ಸರದಿ.
ಕಾಟನ್ ಕ್ಯಾಂಡಿ, ತುಪ್ಪ, ಕೇಕ್ ಗಳು, ಪಾನಿ ಪೂರಿ ಸೇರಿದಂತೆ ಜನರು ಚಪ್ಪರಿಸಿಕೊಂಡು ತಿನ್ನುವ ಆಹಾರ ಪದಾರ್ಥಗಳಲ್ಲಿರುವ ಹಾನಿಕಾರಕ ಅಂಶಗಳನ್ನು ಪತ್ತೆ ಹಚ್ಚಿ ಕೆಲವೊಂದಕ್ಕೆ ನಿಷೇಧ ಹೇರಿತ್ತು. ಇದೀಗ ಉಪ್ಪಿನ ಸರದಿ. ಲ್ಯಾಬ್ ಪರೀಕ್ಷೆಯಲ್ಲಿ ಉಪ್ಪು ಕೂಡಾ ಸುರಕ್ಷಿತವಲ್ಲ ಎಂದು ತಿಳಿದುಬಂದಿದೆ.
ಉಪ್ಪಿನಲ್ಲಿ ಅಯೋಡಿನ್ ಕೊರತೆ, ಸುಣ್ಣ, ಸಿಂಥೆಟಿಕ್ ಪೊಟ್ಯಾಷಿಯಂ ಕ್ಲೋರೈಡ್ ಅಂಶ ಪತ್ತೆಯಾಗಿದೆ. ಒಂದು ವೇಳೆ ನೀವು ಮನೆಗೆ ತರುವ ಉಪ್ಪು ಶುದ್ಧವಾಗಿದ್ದರೆ ಒಂದು ಲೋಟ ನೀರಿಗೆ ಒಂದು ಸ್ಪೂನ್ ಉಪ್ಪು ಹಾಕಿ ಕರಗಿಸಿದರೆ ಅದು ಬಣ್ಣ ಬಿಡುವುದಿಲ್ಲ ಮತ್ತು ಸಂಪೂರ್ಣವಾಗಿ ಕರಗುತ್ತದೆ. ಇಲ್ಲದೇ ಹೋದರೆ ಅದು ಕಲಬೆರಕೆಯಾಗಿದೆ ಎಂದರ್ಥ.