ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಸಿರಾಡುವ ಗಾಳಿಯೂ ಅಪಾಯಕಾರಿ ಮಟ್ಟ ತಲುಪಿದೆ. ನಗರದಲ್ಲಿ ಗಾಳಿಯ ಗುಣಮಟ್ಟ ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ವಾರ್ಷಿಕ ಸರಾಸರಿ ನೈಟ್ರೋಜನ್ ಡೈ ಆಕ್ಸೈಡ್ ಸಾಂದ್ರತೆಯು 2023 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಸಿಟಿ ರೈಲ್ವೇ ನಿಲ್ದಾಣ ಏರಿಯಾ ಅತೀ ಹೆಚ್ಚು ಮಾಲಿನ್ಯ ಭರಿತ ಸ್ಥಳವಾಗಿದೆ ಎಂದು ವರದಿ ಹೇಳಿದೆ.
ಬೆಂಗಳೂರು ಮಾತ್ರವಲ್ಲ ದೇಶದ ಪ್ರಮುಖ ನಗರಗಳಾದ ಜೈಪುರ, ಪುಣೆ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ನಗರಗಳಲ್ಲೂ ವಾಯುಮಾಲಿನ್ಯ ಮಿತಿ ಮೀರಿದೆ ಎಂದು ವರದಿ ಹೇಳಿದೆ. ಈ ನಗರಗಳಲ್ಲೂ ನೈಟ್ರೋಜನ್ ಡೈಆಕ್ಸೈಡ್ ಅಂಶ ಹೆಚ್ಚಾಗಿದೆ ಎನ್ನಲಾಗಿದೆ.
ನೈಟ್ರೋಜನ್ ಡೈ ಆಕ್ಸೈಡ್ ಪರಿಣಾಮಗಳು
ನೈಟ್ರೋಜನ್ ಡೈ ಆಕ್ಸೈಡ್ ಪರಿಣಾಮದಿಂದ ಉಸಿರಾಟದ ಸಮಸ್ಯೆ, ಶೀತ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆ ಬರಲಿದೆ. ಇದಲ್ಲದೆ, ವಾಸನೆ ಗ್ರಹಿಸುವ ಶಕ್ತಿ, ಕಣ್ಣಿನ ಸಮಸ್ಯೆ, ಶ್ವಾಸಕೋಶ ಸಂಬಂಧೀ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮೆಜೆಸ್ಟಿಕ್ ಸಿಟಿ ರೈಲ್ವೇ ನಿಲ್ದಾಣದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನೂ ಮೀರಿದ ಪ್ರಮಾಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪತ್ತೆಯಾಗಿತ್ತು.