ಬೆಂಗಳೂರು: ಯಾವುದೇ ಆಹಾರ ಸೇವನೆ ಮಾಡಿದ ತಕ್ಷಣ ನೀರು ಸೇವನೆ ಮಾಡಬಹುದೇ ಎಂಬ ಜಿಜ್ಞಾಸೆ ನಮ್ಮಲ್ಲಿರುತ್ತದೆ. ಇದಕ್ಕೆ ಆಯುರ್ವೇದ ಏನನ್ನುತ್ತದೆ ಎಂಬ ವಿವರಣೆ ಇಲ್ಲಿದೆ ನೋಡಿ.
ಆಯುರ್ವೇದದ ಪ್ರಕಾರ ನಾವು ಆಹಾರ ಸೇವನೆ ಮಾಡುವ ಅರ್ಧಗಂಟೆ ಮೊದಲು ಅಥವಾ 15 ನಿಮಿಷಗಳ ನಂತರವಷ್ಟೇ ನೀರು ಸೇವನೆ ಮಾಡಬಹುದು. ಆಹಾರ ಸೇವನೆ ನಂತರ ಮತ್ತು ಮೊದಲು ನೀರು ಸೇವನೆ ಮಾಡುವುದು ಆಹಾರ ಜೀರ್ಣಕ್ರಿಯೆ ಸುಗಮವಾಗಲಿ ಎಂಬ ಕಾರಣಕ್ಕಾಗಿದೆ.
ಒಂದು ವೇಳೆ ನಾವು ಆಹಾರ ಸೇವನೆ ಸಂದರ್ಭದಲ್ಲಿಯೇ ಸಾಕಷ್ಟು ನೀರು ಸೇವನೆ ಮಾಡಿದರೆ ಆಹಾರ ಜೀರ್ಣಕ್ರಿಯೆ ಸುಗಮವಾಗಿ ಆಗದು. ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆಯಿರುತ್ತದೆ. ಒಂದು ವೇಳೆ ತೀರಾ ಗಂಟಲು ಕಟ್ಟಿದಂತಾದರೆ ಎರಡು ಗುಟುಕು ನೀರು ಮಾತ್ರ ಸೇವನೆ ಮಾಡಿದರೆ ಸಾಕು.
ಆಹಾರ ಸೇವನೆ ಸಂದರ್ಭದಲ್ಲಿ ವಿಪರೀತ ನೀರು ಸೇವನೆ ಮಾಡುವುದರಿಂದ ಅಜೀರ್ಣದ ಸಮಸ್ಯೆಯಾಗಬಹುದು. ಅದೇ ರೀತಿ ಆಹಾರ ಸೇವನೆ ಮಾಡಿದ ತಕ್ಷಣ ಮಲಗಬೇಡಿ. ಇದರಿಂದಲೂ ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಊಟವಾದ ತಕ್ಷಣ ನಾಲ್ಕು ಹೆಜ್ಜೆ ನಡೆದು ಬಳಿಕ ಸ್ವಲ್ಪ ನೀರು ಸೇವನೆ ಮಾಡಿ ಮಲಗಿದರೆ ಉತ್ತಮ.