ಚೀನಾದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಚೀನಾದ ಜನತೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಟ್ಟುನಿಟ್ಟಿನ ಲಾಕ್‌ಡೌನ್ ನಿರ್ಧಾರದಿಂದ ಬೇಸತ್ತು ಅಲ್ಲಲ್ಲಿ ಪ್ರತಿಭಟಿಸಿದ್ದಾಗಿ ಈ ಹಿಂದೆ ವರದಿಯಾಗಿತ್ತು. ಜಿನ್ ಪಿಂಗ್ 3ನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕವಾದರೂ ಕೊವಿಡ್‌ನ ಮಾನದಂಡಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎಂದು ಊಹಿಸಲಾಗಿತ್ತು. ಆದರೆ ಬದಲಾಗಿ ಚೀನಾದಾದ್ಯಂತ ಮತ್ತೆ ಕಟ್ಟುನಿಟ್ಟಿನ ಲಾಕ್‌ಡೌನ್ ವಿಧಿಸಿರುವುದಾಗಿ ವರದಿಯಾಗಿದೆ. ಶಾಂಘೈನ ಯಾಂಗ್‌ಪು ಜಿಲ್ಲೆಯಲ್ಲಿ ಶುಕ್ರವಾರ ಸಾಮೂಹಿಕ ಕೊವಿಡ್ ಪರೀಕ್ಷೆಗೆ ಆದೇಶಿಸಲಾಗಿದೆ. ಕೋವಿಡ್‌ನ ಮೂಲ ಕೇಂದ್ರಬಿಂದುವಾಗಿರುವ ವುಹಾನ್‌ನಿಂದ ಪೂರ್ವ ಕರಾವಳಿಯಲ್ಲಿರುವ ಚೀನಾದ ಕೈಗಾರಿಕಾ ವಲಯದವರೆಗೂ ಹೊಸದಾಗಿ ಲಾಕ್‌ಡೌನ್‌ಅನ್ನು ವಿಧಿಸಲಾಗಿದೆ. ಗುವಾಂಗ್‌ಝೌದಲ್ಲಿನ ರೆಸ್ಟೋರೆಂಟ್‌ಗಳನ್ನು, ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೊವಿಡ್ ಸೋಂಕಿತ ವ್ಯಕ್ತಿಗಳು ಯಾರಾದರೂ ಕಂಡುಬಂದಲ್ಲಿ ನೆರೆಹೊರೆಯವರು ಕೂಡಾ ಮನೆಯಿಂದ ಹೊರಗೆ ಬರದಂತೆ ಆದೇಶಿಸಲಾಗಿದೆ.