Select Your Language

Notifications

webdunia
webdunia
webdunia
webdunia

ಇಂದಿರಾ, ನೆಹರು ಹೆಸರಲ್ಲಿ ಬಾರ್ ತೆರೆಯಲಿ: ರವಿ

webdunia
ಬೆಂಗಳೂರು , ಶುಕ್ರವಾರ, 13 ಆಗಸ್ಟ್ 2021 (08:53 IST)
ಬೆಂಗಳೂರು (ಅ.13): ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಹೆಸರಲ್ಲಿ ಬಾರ್, ನೆಹರು ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಮಾಡಲಿ. ಬಡವರಿಗೆ ಅನ್ನಪೂರ್ಣೇಶ್ವರಿ ಹೆಸರಲ್ಲಿ ಅನ್ನ ಕೊಟ್ಟರೇನು? ಇಂದಿರಾ ಹೆಸರಲ್ಲಿ ಅನ್ನ ಕೊಟ್ಟರೇನು? ಜನರ ತೆರಿಗೆಯಿಂದ ಅನ್ನ ಕೊಡುವುದಲ್ಲವೇ? ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಮತ್ತು ಇಂದಿರಾ ಹೆಸರಲ್ಲಿ ಕ್ಯಾಂಟೀನ್ ತೆರೆದರೆ ನಮ್ಮ ಅಡ್ಡಿ ಇಲ್ಲ. ಅಲ್ಲದೇ, ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಹೆಸರಲ್ಲಿ ಬಾರ್ ಹಾಗೂ ನೆಹರು ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ. ದೇಶಕ್ಕೆ ನೆಹರು, ಇಂದಿರಾಗಾಂಧಿ ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಅವರ ಗುಲಾಮರು ಮಾತ್ರ ಒಪ್ಪಿಕೊಳ್ಳಲು ಸಾಧ್ಯ. ಆದರೆ, ನಾವು ಮೂರ್ಖರು ಮತ್ತು ಗುಲಾಮರಲ್ಲ ಎಂದು ಕಿಡಿಕಾರಿದರು.
ದೇಶದ 200ಕ್ಕೂ ಹೆಚ್ಚು ಯೋಜನೆಗಳಿಗೆ ಅವರ ಹೆಸರು ಇಡಲಾಗಿದೆ. ಹಾಗಿದ್ದರೆ ಬೇರೆ ಯಾರೂ ದೇಶಕ್ಕೆ ಕೊಡುಗೆ ನೀಡಿಲ್ಲವೇ? ಅನ್ನಪೂರ್ಣೇಶ್ವರಿ ರಾಜಕೀಯ ವ್ಯಕ್ತಿಯಲ್ಲ. ಅನ್ನದ ದೇವತೆ. ದುರ್ಭಿಕ್ಷ ಬಂದಾಗ ಅನ್ನ ಕೊಡುವ ತಾಯಿ ಆಕೆ. ಅದಕ್ಕೆ ಅನ್ನಪೂರ್ಣೇಶ್ವರಿ ಹೆಸರು ಇಡಲು ಹೇಳಿದ್ದೇನೆ. ನಾನೇನಾದರೂ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಹೆಸರು ಇಡಲು ಹೇಳಿದರೆ ಅದು ರಾಜಕಾರಣ ಆಗುತ್ತಿತ್ತು ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ನಿಜವಾದ ಪ್ರೀತಿ ಇದ್ದರೆ ಇಂದಿರಾ ಹತ್ಯೆಯಾದ ತಕ್ಷಣ ಇಂದಿರಾ ಕ್ಯಾಂಟೀನ್ ತೆರೆಯಬೇಕಿತ್ತು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದಿದೆ. 2017-18ರಲ್ಲಿ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸಲಾಯಿತು. ಇಂದಿರಾ ಗಾಂಧಿ ಅವರ ಮೇಲಿನ ಪ್ರೇಮದಿಂದ ಈ ಕ್ಯಾಂಟೀನ್ ಆರಂಭಿಸಿಲ್ಲ. ಅದು ರಾಜಕಾರಣಕ್ಕಾಗಿ ಮತ್ತು ದುಡ್ಡು ಹೊಡೆಯಲು ಮಾಡಿದ ನಿರ್ಧಾರ ಎಂದರು.
ನೆಹರು ಅವರ ಒಳ್ಳೆಯ ತೀರ್ಮಾನಗಳನ್ನು ಪಕ್ಷವು ನಮ್ಮ ತೀರ್ಮಾನ ಎಂದು ಭಾವಿಸಿ ಒಪ್ಪಿಕೊಳ್ಳಲಿದೆ. ಹಾಗೆಯೇ ನೆಹರು ಕೆಲವು ಎಡಬಿಡಂಗಿತನ ಮಾಡಿದ್ದಾರೆ. ಅಂತಹ ಎಡಬಿಡಂಗಿತನವನ್ನು ಸರಿಪಡಿಸುವ ಕೆಲಸವನ್ನು 370ನೇ ವಿಧಿ ರದ್ದು ಮಾಡುವ ಮೂಲಕ ಮಾಡಲಾಗಿದೆ. ದೇಶದ ಹಿತದೃಷ್ಟಿಯಿಂದ ಸರಿಪಡಿಸಬೇಕಾದ ಕೆಟ್ಟತೀರ್ಮಾನವಿದ್ದರೆ ಅದನ್ನು ಸರಿಪಡಿಸಲೇಬೇಕು ಎಂಬ ನಿಲುವು ನಮ್ಮದು.
ಬದ್ಧತೆಗಾಗಿ ಅಲ್ಲ. 1989-94, 1999-2006ರ ನಡುವೆ ಕಾಂಗ್ರೆಸ್ ಸರ್ಕಾರ ಇದ್ದರೂ ಯಾಕೆ ಇಂದಿರಾ ಕ್ಯಾಂಟೀನ್ ತೆರೆದಿಲ್ಲ. ಇಂದಿರಾ ಗಾಂಧಿ ಅವರ ಎಲ್ಲಾ ನಿರ್ಧಾರಗಳನ್ನು ವಿರೋಧಿಸುವ ಪೂರ್ವಗ್ರಹ ಪೀಡಿತ ಮನಸ್ಥಿತಿ ನಮ್ಮದಲ್ಲ. ಇಂದಿತಾ ಹತ್ಯೆಯ ನೆಪದಲ್ಲಿ ಹತ್ತಾರು ಸಾವಿರ ಸಿಖ್ಖರ ನರಮೇಧ ನಡೆದಿತ್ತು ಎಂದು ರವಿ ವಾಗ್ದಾಳಿ ನಡೆಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಕೆಲ ವರ್ಷಗಳಲ್ಲಿ ಕೋವಿಡ್ ಮಕ್ಕಳ ರೋಗವಾಗಬಹುದು: ಅಧ್ಯಯನ