ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ನಿರ್ದಿಷ್ಟ ಕಾಲಮಿತಿಯನ್ನು ಒಳಗೊಂಡ ಅಫಿಡವಿಟ್ ಸಲ್ಲಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಯುಕ್ತರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
2009ರ ತನ್ನ ಆದೇಶವನ್ನು ಜಾರಿಗೊಳಿಸುವ ಸಂಬಂಧ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದನ್ನು ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಸುಪ್ರೀಂ ಕೋರ್ಟ್ 2009ರಲ್ಲಿ ಹೊರಡಿಸಿರುವ ಆದೇಶವನ್ನು ಜಾರಿಗೊಳಿಸಲು ಪಾಲಿಕೆ ಈಗ ಪ್ರಕ್ರಿಯೆ ಆರಂಭಿಸುವುದು ಆಘಾತಕಾರಿ ವಿದ್ಯಮಾನ ಎಂದು ನ್ಯಾಯಾಲಯ ಹೇಳಿತು. ಸುಪ್ರೀಂಕೋರ್ಟ್ 2009ರ ಸೆಪ್ಟೆಂಬರ್ 29ರಂದು ಆದೇಶ ಹೊರಡಿಸಿದ ನಂತರ 277 ಕಾನೂನುಬಾಹಿರ ಧಾರ್ಮಿಕ ಕಟ್ಟಡ ನಿರ್ಮಿಸಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಲಾಯಿತು.
ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ 1,893 ಕಾನೂನುಬಾಹಿರ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. 2009ರ ಬಳಿಕ ನಿರ್ಮಿಸಲಾದ 1,548 ಧಾರ್ಮಿಕ ಕಟ್ಟಡಗಳನ್ನು ಕ್ರಮಬದ್ಧಗೊಳಿಸಬಹುದಾಗಿದ್ದು, 105 ಕಟ್ಟಡಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. 2009ರ ನಂತರ ನಿರ್ಮಿಸಲಾದ ಉಳಿದ 240 ಕಾನೂನುಬಾಹಿರ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಈ ಹಿಂದೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಉಲ್ಲೇಖಿಸಿದೆ.
ವಿಚಾರಣೆಯ ಸಂದರ್ಭದಲ್ಲಿ 2009ರ ಸೆಪ್ಟೆಂಬರ್ ಬಳಿಕ ನಿರ್ಮಿಸಲಾದ 277 ಕಟ್ಟಡಗಳನ್ನು ಗುರುತಿಸಲಾಗಿದೆ. ನ್ಯಾಯಾಲಯದ ಆದೇಶಕ್ಕೂ ಮುನ್ನ ನಿರ್ಮಿಸಲಾದ 105 ಕಾನೂನುಬಾಹಿರ ಕಟ್ಟಡಗಳನ್ನು ಸ್ಥಳಾಂತರಿಸಲು ಗುರುತಿಸಲಾಗಿದೆ ಎಂದು ಬಿಬಿಎಂಪಿ ಪರ ವಕೀಲ ದೇವೇಂದ್ರಪ್ಪ ನ್ಯಾಯಾಲಯಕ್ಕೆ ತಿಳಿಸಿದರು.
ಆಗ ಪೀಠವು “2009ಕ್ಕೂ ಮುನ್ನ ನಿರ್ಮಿಸಿದ್ದ ಕಟ್ಟಡಗಳನ್ನು 2010ರಲ್ಲೇ ತೆರವುಗೊಳಿಸಬೇಕಿತ್ತು. ಕಟ್ಟಡ ಸ್ಥಳಾಂತರ ಸಂಬಂಧ ಪ್ರಸ್ತಾಪ ಇದ್ದರೂ ಇದುವರೆಗೂ ಏಕೆ ಕ್ರಮಕೈಗೊಂಡಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣ ನೀಡಲಾಗಿಲ್ಲ” ಎಂದಿತು.
“ಇದರ ನಡುವೆ, 379 ಕಟ್ಟಡಗಳು ಸಾರ್ವಜನಿಕ ಸ್ಥಳ ಅಥವಾ ಖಾಸಗಿ ಜಾಗದಲ್ಲಿವೆಯೇ ಎಂಬ ವಿವಾದವಿದೆ. ಕಟ್ಟಡ ಸ್ಥಳಾಂತರ ಅಥವಾ ಅವುಗಳನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಆಯುಕ್ತರು ನಿರ್ದಿಷ್ಟ ಕಾಲಮಿತಿ ಉಲ್ಲೇಖಿಸಿಲ್ಲ” ಎಂದು ನ್ಯಾಯಾಲಯ ಹೇಳಿತು.
ಕಟ್ಟಡ ತೆರವಿಗೆ ಸಂಬಂಧಿಸಿದ ಕಾಲಾನುಕ್ರಮವನ್ನು ಒಳಗೊಂಡ ಅಫಿಡವಿಟ್ ಅನ್ನು ಮೂರು ವಾರಗಳ ಒಳಗೆ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರಿಗೆ ಆದೇಶಿಸಿರುವ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.