ಬೆಂಗಳೂರು: "ಮನೆಯಲ್ಲಿ ಕೂತಿರುವವರಿಗೆಲ್ಲ ವೆಲ್ಕಮ್ ಮಾಡೋಕೆ ಆಗಲ್ಲ" ಎನ್ನುವ ಮೂಲಕ ಕುರ್ಚಿ ಕಸಿದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೆ ಡಿಕೆ ಶಿವಕುಮಾರ್ ಅವರನ್ನ ಶಾಶ್ವತವಾಗಿ ಮನೆಯಲ್ಲಿ ಕೂರಿಸುವ ಎಚ್ಚರಿಕೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ರಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಸಾಧನಾ ಸಮಾವೇಶದಲ್ಲಿ ಸಿಎಂ ಭಾಷಣ ಮಾಡುವ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ ಕೋರಲು ಹಿಂದೇಟು ಹಾಕಿದ ಪ್ರಸಂಗ ನಡೆಯಿತು.
ಸಿಎಂ ಭಾಷಣದ ವೇಳೆ ಕಾಂಗ್ರೆಸ್‌ನ ನಾಯಕರೊಬ್ಬರು ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸುವಂಯೆ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಸಿದ್ದರಾಮಯ್ಯ, ಡಿಕೆಶಿ ಇಲ್ಲಿ ಇಲ್ವಲ್ಲಾ.ಶಿವಕುಮಾರ್ ಬೆಂಗಳೂರಿಗೆ ಹೋಗ್ತಿನಿ ಅಂತಾ ಹೋದ್ರು. ಅವರು ವೇದಿಕೆಯ ಮೇಲಿಲ್ಲ ಹೀಗಾಗಿ ಅವರ ಹೆಸರು ಹೇಳಲಿಲ್ಲ ಅಂತ ಹೇಳಿದ್ರು. ವೆಲ್‌ಕಮ್ ಮಾಡೋದು ವೇದಿಕೆ ಮೇಲೆ ಇರುವವರಿಗೆ, ಮನೆಯಲ್ಲಿ ಕೂತೋರಿಗೆಲ್ಲ ವೆಲ್‌ಕಮ್ ಮಾಡೋಕಾಗಲ್ಲ ಅಂತ ಗದರಿದರು.
ಈ ವಿಚಾರವಾಗಿ ಆರ್ ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಯಾರೇ ಇದ್ದರೂ ಅದನ್ನೇ ಮಾಡುತ್ತಿದ್ದರು, ಅಧಿಕಾರ ಹಂಚಿಕೆಗೆ ಯಾವುದೇ ಒಪ್ಪಂದ ಆಗಿಲ್ಲ, 5 ವರ್ಷ ನಾನೇ ಸಿಎಂ, 2028ಕ್ಕೂ ನನ್ನದೇ ನೇತೃತ್ವ ಎಂದು ದೆಹಲಿಯಲ್ಲಿ ಕೂತು ಡಿ.ಕೆ. ಶಿವಕುಮಾರ್ ಅವರ ಕನಸು ನುಚ್ಚು ನೂರು ಮಾಡಿದ್ದೂ ಅಲ್ಲದೆ ಅಪಮಾನ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಈಗ ಮೈಸೂರಿನಲ್ಲಿ ಮತ್ತೊಮ್ಮೆ ಡಿಸಿಎಂ ಸಾಹೇಬರಿಗೆ ನೇರವಾಗಿ ತಿವಿದಿದ್ದಾರೆ.
"ಮನೆಯಲ್ಲಿ ಕೂತಿರುವವರಿಗೆಲ್ಲ ವೆಲ್ಕಮ್ ಮಾಡೋಕೆ ಆಗಲ್ಲ" ಎನ್ನುವ ಮೂಲಕ ಕುರ್ಚಿ ಕಸಿದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೆ ಡಿಕೆ ಶಿವಕುಮಾರ್ ಅವರನ್ನ ಶಾಶ್ವತವಾಗಿ ಮನೆಯಲ್ಲಿ ಕೂರಿಸುವ ಎಚ್ಚರಿಕೆ ಕೊಟ್ಟರಾ ಸಿಎಂ ಸಿದ್ದರಾಮಯ್ಯನವರು?
ಒಟ್ಟಿನಲ್ಲಿ ಸೆಪ್ಟೆಂಬರ್ ಕ್ರಾಂತಿಯ ಜ್ವಾಲೆಗೆ ಈಗಾಗಲೇ ಕಿಡಿ ಹೊತ್ತಿಕೊಂಡಿರುವುದಂತೂ ಸತ್ಯ. ಇದಕ್ಕೆ ಸಿದ್ದಾರಾಮಯ್ಯನವರು ಸಾಧ್ಯವಾದಾಗಲೆಲ್ಲ ತುಪ್ಪ ಸುರಿಯುವುದೂ ಸತ್ಯ.
ಇವೆಲ್ಲದರ ಮಧ್ಯೆ ಕರ್ನಾಟಕ ಅಭಿವೃದ್ಧಿ ಇಲ್ಲದೆ ಸೊರಗುತ್ತಿರುವುದೂ ಸತ್ಯ. ಇದು ಕನ್ನಡಿಗರ ದುರಾದೃಷ್ಟ.