ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ನಡೆಸುತ್ತಿರುವುದು ಸಾಧನಾ ಸಮಾವೇಶವಲ್ಲ, ಹೈಕಮಾಂಡ್‌ಗೆ ಬ್ಲಾಕ್‌ಮೇಲ್ ಮಾಡುತ್ತಿರುವ ಸಮಾವೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕೆ ಮಾಡಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಸಿಎಂ ಕುರ್ಚಿ ಅಲುಗಾಡುವ ಸಂದರ್ಭ ಎದುರಾದಾಗಲೆಲ್ಲಾ ಅವರು ಸಮಾವೇಶ ನಡೆಸುತ್ತಾರೆ. ಈ ಮೂಲಕ ಅವರ ಪಕ್ಷದ ಹೈಕಮಾಂಡ್ ಬೆದರಿಸುವ ತಂತ್ರ ಮಾಡುತ್ತಾರೆ ಎಂದು ಆರೋಪಿಸಿದರು.
ನವದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಲು ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಸಮಯವನ್ನೇ ನೀಡಲಿಲ್ಲ. ಹೀಗಾಗಿ ಸವಾಲು ಹಾಕುವ ಉದ್ದೇಶದಿಂದ ಈ ಸಮಾವೇಶ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಏನು ಕಡಿದು ಕಟ್ಟೆಹಾಕಿದ್ದಾರೆಂದು ಸಮಾವೇಶ ಮಾಡುತ್ತಿದ್ದಾರೆ. ಮುಡಾ ಹಗರಣದ ಸಂದರ್ಭದಲ್ಲೂ ಮೈಸೂರಿನಲ್ಲಿ ಸಮಾವೇಶ ನಡೆಸಿದ್ದರು. ಕುರ್ಚಿಗೆ ಕಂಟಕ ಬಂದಾಗೆಲ್ಲಾ ಅವರಿಗೆ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರು) ಸಮುದಾಯದವರು ನೆನಪಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.