Select Your Language

Notifications

webdunia
webdunia
webdunia
webdunia

ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಅಮಾಯಕರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ: ಆರ್‌ ಅಶೋಕ್‌

RCB ಕಾಲ್ತುಳಿತ ಪ್ರಕರಣ

Sampriya

ಬೆಂಗಳೂರು , ಶನಿವಾರ, 19 ಜುಲೈ 2025 (19:06 IST)
ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪತ್ರವನ್ನು ಪೋಸ್ಟ್‌ ಮಾಡಿರುವ ಆರ್‌ ಅಶೋಕ್ ಅವರು ಅವರು,  ಐಪಿಎಲ್ ವಿಜಯೋತ್ಸವದ ವೇಳೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತದಲ್ಲಿ ಪ್ರಾಣ ಕಳೆದುಕೊಂಡ 11 ಅಮಾಯಕ ಯುವಕರ ಕುಟುಂಬದವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.

ದುರಂತಕ್ಕೆ ಪೊಲೀಸ್ ಇಲಾಖೆಯೇ ಕಾರಣ ಎಂದು ಬಿಂಬಿಸುವ ಮೂಲಕ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದು, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಲು ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ.

ಪತ್ರದಲ್ಲಿ ಆರ್‌ ಅಶೋಕ್ ಉಲ್ಲೇಖಿಸಿರುವ ಅಂಶಗಳು ಹೀಗಿದೆ: 

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11ಮಂದಿ ಮೃತಪಟ್ಟು, 56 ಜನರು ಗಾಯಗೊಂಡಿರುವ ವಿಷಯ ರಾಷ್ಟ್ರವ್ಯಾಪಿ ಚರ್ಚೆಯಾಗಿರುತ್ತದೆ. ಈ ಪ್ರಕರಣವು ಕರ್ನಾಟಕ ಕ್ರೀಡಾ ಇತಿಹಾಸದಲ್ಲಿಯೇ 'ಕಪ್ಪುಚುಕ್ಕೆ'ಯಾಗಿದೆ. ಈ ವಿಷಯವಾಗಿ ಪೊಲೀಸರು ಮತ್ತು ರಾಜ್ಯ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿವೆ.

ಪೊಲೀಸರು ಜನಸಂದಣಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದರ ಕಾರಣ ಕಾಲ್ತುಳಿತ ಸಂಭವಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಆದರೆ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಕೈತೊಳೆದುಕೊಂಡು ಕುಳಿತಿದೆ.

ಈ ಬಗ್ಗೆ ಕೇಂದ್ರಿಯ ಆಡಳಿತಾತ್ಮಕ ನ್ಯಾಯಮಂಡಳಿಯು ಅಧಿಕಾರಿಯೊಬ್ಬರ ಅಮಾನತ್ತಿನ ವಿಚಾರವಾಗಿ ದಾಖಲಾಗಿದ್ದ ಅರ್ಜಿಯ ಮೇಲಿನ ವಿಚಾರಣೆಯಲ್ಲಿ ಇದಕ್ಕೆ ಕೇವಲ ಪೊಲೀಸ್ ಅಧಿಕಾರಿಗಳನ್ನು ಮಾತ್ರ ಹೊಣೆಮಾಡಿದ್ದು ಸೂಕ್ತವಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದೆ.

ಅಮಾಯಕ ಜನರ ಪ್ರಾಣ ಹಾನಿಗೆ ಕಾರಣವಾದ ಈ ಪ್ರಕರಣಕ್ಕೆ ನಿಜವಾದ ಕಾರಣಕರ್ತರು ಯಾರು ಎಂಬುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ರಾಜ್ಯದ ಜನತೆಯ ಪ್ರಶ್ನೆಯೂ ಕೂಡ ಇದೇ ಹಾಗಿದೆ.

ಆದ್ದರಿಂದ, ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಈ ವಿಚಾರದಲ್ಲಿ ಯಾವುದೇ ರಾಜಕೀಯ ಬೆರಸದೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ, ಘಟನೆಗೆ ನಿಜವಾದ ಕಾರಣಿಕರ್ತರಾದವರನ್ನು ಗುರುತಿಸಿ, ಪ್ರಾಣ ಕಳೆದುಕೊಂಡ ಅಮಾಯಕರ ಜೀವಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತುರ್ತು ನಿರ್ವಹಣಾ ಕಾಮಗಾರಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್ ವ್ಯತ್ಯಯ