ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗುವ ಸೂಚನೆಯಿದೆ. ಹೀಗಿರುವಾಗ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿದೆ. ಈ ಪ್ರಶ್ನೆಗೆ ಕೋಡಿ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ರಾಜಕೀಯ, ದೇಶ, ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಕರಾರುವಾಕ್ ಆಗಿ ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳು ಈ ಬಾರಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸಂಗಮೇಶನು ಅರಿವನೆ, ಆದರೆ ಒಳಹಡ್ಡ ಬಂದಿದೆ, ಶಿವನ ಮುಡಿಯುವ ಎರಡು ದುಂಡು ಮಲ್ಲಿಗೆಗಳು ಶಿವನ ಬಲಪಾದ ಸೇರಿಯಾವು. ಮುಂದೆ ಸುಖಾಂತ್ಯವಾಗಲಿದೆ ಎಂದಿದ್ದಾರೆ.
ಸಂಕ್ರಾಂತಿ ವೇಳೆಗೆ ರಾಜ್ಯ ರಾಜಕೀಯದಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ ಎಂದಿದ್ದಾರೆ. ಸಂಕ್ರಾಂತಿಯ ನಂತರ ಬರುವ ಭವಿಷ್ಯ ವ್ಯಾಪಾರಸ್ಥರಿಗೆ, ರಾಜರು ದೊರೆಗಳಿಗೆ ಬರುತ್ತದೆ. ಹೀಗಾಗಿ ಈ ಸಂಕ್ರಾಂತಿಯ ನಂತರ ರಾಜಕೀಯ ವಿಚಾರ ನಿರ್ಧಾರವಾಗುತ್ತದೆ ಎಂದಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಶ್ರೀಗಳು ಬೇಡನೊಬ್ಬ ಜಿಂಕೆ ಓಡಿಸಿಕೊಂಡು ಬಂದ. ಅಲ್ಲಿ ಸನ್ಯಾಸಿ ಕೂತಿದ್ದ. ಅವನು ಸನ್ಯಾಸಿ ಬಳಿ ಜಿಂಕೆ ಬಂದಿತ್ತಾ ಎಂದು ಕೇಳುತ್ತಾನೆ. ಹೇಳಿಕೇಳಿ ಅವನು ಸನ್ಯಾಸಿ. ಯಾವುದು ನೋಡಿತು ಅದು ಮಾತನಾಡಲಿಲ್ಲ ಯಾವುದು ಮಾತನಾಡುತ್ತೆ ಅದು ನೋಡಿಲ್ಲ. ನಾನೇನು ಮಾಡಲಿ ಎಂದನಂತೆ ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಡಿಕೆಶಿ ಸಿಎಂ ಆಗುತ್ತಾರೆ ಎಂಬುದಕ್ಕೆ ಖಚಿತತೆ ಇಲ್ಲ ಎಂದಿದ್ದಾರೆ.