ಬೆಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ ಕರೂರ್ ಕಾಲ್ತುಳಿತ ಪ್ರಕರಣ ಸಂಬಂಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ದುರಂತದಲ್ಲಿ 11 ಜನ ಸಾವನ್ನಪ್ಪಿದ್ದರು. ಅದೇ ದೊಡ್ಡ ಆಘಾತವಾಗಿತ್ತು. ಈಗ ಕರೂರಿನಲ್ಲಿ ಅದಕ್ಕಿಂತಲೂ ದೊಡ್ಡ ದುರಂತವಾಗಿದೆ ಎಂದು ಮರುಕ ವ್ಯಕ್ತಪಡಿಸಿದರು.
ಈ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ದುರಂತ ದೇಶದಲ್ಲಿ ಹಿಂದೆಂದೂ ನಡೆದಿಲ್ಲ. ದುರ್ಘಟನೆಯಲ್ಲಿ ಚಿಕ್ಕ ಮಕ್ಕಳೂ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಇಡೀ ದೇಶ ಬೆಚ್ಚಿಬಿದ್ದಿದೆ ಎಂದರು.
ಕರೂರು ದುರಂತ ಸಾರ್ವಜನಿಕರಿಗೆ ದೊಡ್ಡ ದಿಗ್ಭ್ರಾಂತಿ ತಂದಿದೆ. ಡಿಎಂಕೆ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡು ಈ ಪ್ರಕರಣವನ್ನು ವಿಜಯ್ ಅವರ ತಲೆಗೆ ಕಟ್ಟುತ್ತಿದೆ ಎಂದರು.
ಅವರು ಸ್ಥಳ ಕೇಳಿದ್ದೆಲ್ಲಿ? ಅಲ್ಲಿನ ಸರ್ಕಾರ ಅನುಮತಿ ಕೊಟ್ಟಿದ್ದೆಲ್ಲಿ? ವಿಜಯ್ ಬಂದು ರ‍್ಯಾಲಿ ಮಾಡಿದ್ರು ಹೋದ್ರು, ಅವರದ್ದೂ ತಪ್ಪಿದೆ. ವಿಜಯ್ ಕ್ಷಮೆ ಕೇಳಿಲ್ಲ, ಆಸ್ಪತ್ರೆಗೆ ಹೋಗಲಿಲ್ಲ ಎಂದು ವಿಜಯ್ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು.