ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ₹1600 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆ ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಇದೀಗ ಆ ಕಾಮಗಾರಿಗಳು ನಡೆದಿದ್ದರೆ ಇಂದು ಬೆಂಗಳೂರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದರು.
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪ್ರವಾಹ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದ 2 ವರ್ಷದಿಂದ ಏನ್ ಮಾಡ್ತಾ ಇದೆ. ಇಡೀ ಬೆಂಗಳೂರು ಮಳೆಯಿಂದಾಗಿ ಮುಳುಗುತ್ತಿದ್ದು, ಜನರು ಪರದಾಡುತ್ತಿದ್ದಾರೆ ಎಂದರು.
ಮಳೆಯಿಂದ ನಡೆದ ದುರ್ಘಟನೆಯಿಂದಾಗಿ 5 ಜನ ಸಾವನ್ನಪ್ಪಿದ್ದಾರೆ. ಇದೀಗ ಸಾವಿನ ಮುಂದೆ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನು ರದ್ದು ಮಾಡಬೇಕಿತ್ತು. ಕಾಂಗ್ರೆಸ್‌ನ ತಪ್ಪಿನಿಂದಲೇ ಜನರು ಸತ್ತಿದ್ದಾರೆ. ಇಂತಹ ಸಮಾವೇಶ ಮಾಡುವ ನೈತಿಕ ಅರ್ಹತೆ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದರು.
ಬೆಂಗಳೂರಿನ ಸಾಯಿ ಬಡಾವಣೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿ, ಅಭಿವೃದ್ಧಿ ಮಾಡುತ್ತೇನೆಂದು ಹೇಳಿದ್ದರು. ಸಿಲ್ಕ್ ಬೋರ್ಡ್ ಬಳಿ ಕಳೆದ ಸಲವೂ ಪ್ರವಾಹವಾಗಿತ್ತು. ಇಷ್ಟಾದರೂ ಅಭಿವೃದ್ಧಿಗೆ ನಯಾಪೈಸೆ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.