Publish Date: Mon, 09 Feb 2026 (08:43 IST)
Updated Date: Mon, 09 Feb 2026 (08:46 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಹಗಲು ವಿಪರೀತ ಬಿಸಿಲು ಕಂಡುಬರುತ್ತಿತ್ತು. ಆದರೆ ಇಂದು ಬಿಸಿಲು ಕಡಿಮೆಯಾಗಲಿದ್ದು ಹವಾಮಾನದಲ್ಲಿ ಮಹತ್ವದ ಬದಲಾವಣೆಯಾಗಲಿದೆ.
ರಾಜ್ಯದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿವೆ. ಕಳೆದ ವಾರ ನೋಡಿದರೆ ಇನ್ನೇನು ಬೇಸಿಗೆಕಾಲ ಶುರುವಾಗಿಯೇ ಬಿಟ್ಟಿತು ಎನ್ನುವಷ್ಟು ಬಿಸಿಲು ಕಂಡುಬಂದಿತ್ತು. ಆದರೆ ರಾತ್ರಿ ಮಾತ್ರ ಚಳಿ ಕಂಡುಬರುತ್ತಿತ್ತು. ವಾರಂತ್ಯಕ್ಕೆ ತಾಪಮಾನದಲ್ಲಿ ಇಳಿಕೆ ಕಂಡುಬಂದಿತ್ತು.
ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಈ ವಾರ ತಾಪಮಾನದಲ್ಲಿ ಭಾರೀ ಇಳಿಕೆಯಾಗಲಿದೆ. ಇಂದು ಮಳೆಯ ಸಾಧ್ಯತೆಯಿಲ್ಲ. ಆದರೆ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ತುಮಕೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆ.
ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು ಬಿಸಲಿನ ವಾತಾವರಣ ಕಂಡುಬರುವುದು. ಇಂದು ರಾಜ್ಯದ ಗರಿಷ್ಠ ಸರಾಸರಿ ತಾಪಮಾನ 29 ಡಿಗ್ರಿಯಷ್ಟಿರಲಿದೆ. ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟಿರಲಿದೆ.