Publish Date: Sat, 14 Jun 2025 (08:40 IST)
Updated Date: Sat, 14 Jun 2025 (08:43 IST)
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿಯೇ ಇದೆ. ಜೂನ್ 16 ರವರೆಗೂ ಈ ಕೆಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರವಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮೊನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಕರ್ನಾಟಕದ ಉತ್ತರ ಭಾಗಗಳ ಕೆಲವು ಜಿಲ್ಲೆಗಳಲ್ಲೂ ಭಾರೀ ಮಳೆಯಾಗುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಗಾರಿನ ಜೊತೆಗೆ ಸೈಕ್ಲೋನ್ ಪರಿಣಾಮವೂ ಇರುವ ಕಾರಣ ಭಾರೀ ಮಳೆಯಾಗುತ್ತಿದೆ ಎನ್ನಲಾಗಿದೆ. ಜೂನ್ 16 ರವರೆಗೂ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ವರದಿ ಹೇಳಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಜೊತೆಗೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಕಲಬುರಗಿ, ಹಾಸನದಲ್ಲೂ ಭಾರೀ ಮಳೆಯಾಗಲಿದೆ.
ಇದಲ್ಲದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಕಡಿಮೆಯಾಗಿದ್ದು ದಿನವಿಡೀ ಮೋಡ ಕವಿದ ವಾತಾವರಣವಿರುತ್ತದೆ. ಮೈಸೂರು, ಕೋಲಾರ, ಹುಬ್ಬಳ್ಳಿ, ಧಾರವಾಢ, ಚಾಮರಾಜನಗರ, ಚಿತ್ರದುರ್ಗ, ಮಂಡ್ಯ, ತುಮಕೂರು, ಹಾವೇರಿ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.