ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮುಂಗಾರುಪೂರ್ವ ಮಳೆಯಾಗುತ್ತಿದ್ದು, ಉಳಿದಂತೆ ಬಿಸಿಲಿನ ವಾತಾವರಣವಿದೆ. ವಿಶೇಷವಾಗಿ ದಕ್ಷಿಣ ಕನ್ನಡದವರಿಗೆ ಇಂದು ಹವಾಮಾನ ವರದಿ ತಪ್ಪದೇ ಗಮನಿಸಬೇಕಾಗುತ್ತದೆ. ರಾಜ್ಯದಲ್ಲಿ ಇಂದಿನ ಹವಾಮಾನ ವರದಿ ಹೇಗಿದೆ ನೋಡಿ.
ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಲೇ ಇದೆ. ನಿನ್ನೆ ಹಾಗೂ ಮೊನ್ನೆಯೂ ವಿಪರೀತ ಗಾಳಿ ಮಳೆ ಕಂಡುಬಂದಿತ್ತು. ಇಂದೂ ಕೂಡಾ ಈ ಜಿಲ್ಲೆಯಲ್ಲಿ ಭಾರೀ ಗುಡುಗು ಸಹಿತ ಮಳೆ ನಿರೀಕ್ಷಿಸಲಾಗಿದೆ.
ದಕ್ಷಿಣ ಕನ್ನಡ ಜೊತೆಗೆ ಕೊಡಗಿನಲ್ಲೂ ಇಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಂದು ತಕ್ಕಮಟ್ಟಿಗೆ ಮಳೆ ನಿರೀಕ್ಷಿಸಲಾಗಿದೆ.
ಆದರೆ ಉಳಿದಂತೆ ಮಂಡ್ಯ, ಮೈಸೂರು, ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ತುಮಕೂರು, ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ, ಕಲಬುರಗಿ, ಬೀದರ್, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಭಾಗಗಳಲ್ಲಿ ಎಂದಿನಂತೆ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಕರ್ನಾಟಕದಲ್ಲಿ ಇಂದು ಸರಾಸರಿ ಗರಿಷ್ಠ ತಾಪಮಾನ 32 ರಿಂದ 33 ಡಿಗ್ರಿಯಷ್ಟಿರಲಿದೆ.