ಬೆಂಗಳೂರು: ಫೆಬ್ರವರಿ ತಿಂಗಳಲ್ಲಿ ಕೆಲವೆಡೆ ಮಳೆಯ ಸೂಚನೆಯಿದ್ದು ರಾಜ್ಯದಲ್ಲಿ ಮಳೆಯಾಗಲಿದೆಯೇ ಎಂಬ ಅನುಮಾನಗಳಿಗೆ ಇಲ್ಲಿದೆ ಉತ್ತರ. ಕರ್ನಾಟಕದ ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ.
ಮೊನ್ನೆಯಿಂದ ದೇಶದ ಕೆಲವು ಭಾಗಗಳಲ್ಲಿ ಈ ವಾರ ಮಳೆಯಾಗಲಿದೆ ಎಂದು ವರದಿಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಸೂಚನೆ ಕಂಡುಬಂದಿದ್ದು ಈ ಹಿನ್ನಲೆಯಲ್ಲಿ ಉತ್ತರ ಭಾರತದ ಕೆಲವೆಡೆ ಮಳೆಯ ಸೂಚನೆಯಿದೆ.
ಆದರೆ ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ವಿಪರೀತ ಬಿಸಿಲು, ಸೆಖೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಮಳೆ ತಂಪೆರಚುತ್ತದಾ ಎಂಬ ಆಶಾವಾದದಲ್ಲಿದ್ದಾರೆ. ಈ ಸಮಯದಲ್ಲಿ ಮಳೆ ಬಂದಲ್ಲಿ ರೈತರಿಗೆ ತೊಂದರೆಯಾಗಬಹುದು. ಆದರೆ ರಾಜ್ಯದಲ್ಲಿ ಇದೀಗ ಒಣ ಹವೆಯಿದ್ದು ಈ ತಿಂಗಳು ಮಳೆಯಾಗುವ ಸಾಧ್ಯತೆಯಿದೆಯಾ ಎಂಬ ಅನುಮಾನಗಳಿವೆ.
ಹವಾಮಾನ ವರದಿ ಪ್ರಕಾರ ಈ ತಿಂಗಳು ಒಳನಾಡು ಪ್ರದೇಶಗಳಲ್ಲಿ ಒಣ ಹವೆ ಮುಂದುವರಿಯಲಿದ್ದು ಮಳೆಯ ಸಾಧ್ಯತೆಯಿಲ್ಲ. ಆದರೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಈಗ ಅಲ್ಲಲ್ಲಿ ಕೆಲವೊಮ್ಮೆ ಮೋಡ ಕವಿದ ವಾತಾವರಣವಿರುತ್ತದೆ. ಈ ಭಾಗಗಳಲ್ಲಿ ಈ ತಿಂಗಳಲ್ಲಿ ಕೆಲವೊಮ್ಮೆ ಸಣ್ಣ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.