ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಈಗ ಎಲ್ಲೆಡೆ ಬಿಸಿಲಿನ ಝಳದಿಂದ ಜನರು ತತ್ತರಿಸಿದ್ದಾರೆ. ಈ ನಡುವೆ ಮಳೆಯ ಬಗ್ಗೆ ಸುದ್ದಿಯೊಂದು ಹಬ್ಬಿದೆ. ಇದು ನಿಜವೇ, ಲೇಟೆಸ್ಟ್ ಹವಾಮಾನ ವರದಿ ಏನು ಹೇಳುತ್ತಿದೆ ನೋಡಿ.
ಕಳೆದ ಎರಡು ವಾರಗಳಿಂದ ವಿಪರೀತ ಬಿಸಿಲು ಕಂಡುಬರುತ್ತಿದೆ ತಾಪಮಾನ 32-35 ರ ನಡುವೆ ಇದೆ. ದಕ್ಷಿಣ ಕನ್ನಡದಲ್ಲಂತೂ ನಿನ್ನೆ ತಾಪಮಾನ 36 ಡಿಗ್ರಿಗೆ ತಲುಪಿತ್ತು. ಇದು ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ.
ಈ ನಡುವೆ ಮಳೆಯ ಸುದ್ದಿಯೊಂದು ಹರಿದಾಡುತ್ತಿದೆ. ವಾಯುಭಾರ ಕುಸಿತದಿಂದ ಈ ವಾರದಲ್ಲಿ ಮಳೆಯಾಗಲಿದೆ ಎಂಬ ಸುದ್ದಿಯಿದೆ. ಸದ್ಯದ ಹವಾಮಾನ ವರದಿ ಪ್ರಕಾರ ಈ ವಾರದ ಅಂತ್ಯಕ್ಕೆ ಸ್ವಲ್ಪ ಮೋಡ ಕವಿದ ವಾತಾವರಣವಿರಲಿದೆ. ಇದು ಮಳೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಹಾಗಿದ್ದರೂ ಬಹುತೇಕ ಬಿಸಿಲಿನ ವಾತಾವರಣ ಮುಂದುವರಿಯಲಿದೆ.
ಒಂದು ವೇಳೆ ಮಳೆಯಾದರೂ ತಾಪಮಾನದಲ್ಲಿ ಬದಲಾವಣೆಯಿರುವುದಿಲ್ಲ. ಈ ವಾರವಿಡೀ ಗರಿಷ್ಠ ತಾಪಮಾನ 32 ಡಿಗ್ರಿಯಿಂದ 35 ಡಿಗ್ರಿ ಸೆಲ್ಶಿಯಸ್ ವರೆಗೆ ತಲುಪುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 19 ಡಿಗ್ರಿಯಷ್ಟಿರಲಿದೆ.