ಬೆಂಗಳೂರು: ಕರ್ನಾಟಕದಲ್ಲಿ ಸತತ ಬಿಸಿಲಿನಿಂದ ತತ್ತರಿಸಿರುವ ಜನಕ್ಕೆ ಅಲ್ಲಲ್ಲಿ ಕೊಂಚ ಮೋಡ ಕವಿದ ವಾತಾವರಣ ಕಂಡುಬರುತ್ತಿರುವುದು ಆಶಾಭಾವನೆ ಮೂಡಿಸಿದೆ. ಸದ್ಯಕ್ಕೆ ಮಳೆ ಸೂಚನೆಯಿದೆಯೇ ಇಲ್ಲಿದೆ ವಿವರ.
ರಾಜ್ಯದ ಬಹುತೇಕ ಕಡೆ ಈಗ ತಾಪಮಾನ ದಾಖಲೆಯತ್ತ ಸಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಭಾಗಗಳಲ್ಲಿ ತಾಪಮಾನ 35 ಡಿಗ್ರಿಯವರೆಗೂ ತಲುಪುತ್ತಿದೆ. ವಿಪರೀತ ಬಿಸಿಲಿನಿಂದಾಗಿ ಮಧ್ಯಾಹ್ನದ ವೇಳೆ ಹೊರಗೆ ಕಾಲಿಡಲೂ ಆಗದ ಪರಿಸ್ಥಿತಿಯದೆ.
ಆದರೆ ಇದರ ನಡುವೆ ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಸ್ವಲ್ಪ ಮೋಡ ಕವಿದ ವಾತಾವರಣವೂ ಕಂಡುಬರುತ್ತಿದೆ. ಇತ್ತೀಚೆಗೆ ಹವಾಮಾನ ಇಲಾಖೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣವಿದೆ ಎಂದಿತ್ತು. ಹೀಗಾಗಿ ಮಳೆಯ ಆಶಾಭಾವನೆ ಮೂಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಗಲು ವಿಪರೀತ ಬಿಸಿಲಿದ್ದರೂ ಸಂಜೆ ಮತ್ತು ಬೆಳಗ್ಗಿನ ಹೊತ್ತು ಕೊಂಚ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ರಾತ್ರಿ ತಂಪಾದ ಹವೆ ಮುಂದುವರಿದಿದೆ. ಚಂಡಮಾರುತದ ಪರಿಣಾಮ ಕೇರಳ, ಬಿಹಾರ, ನಾಗಾಲ್ಯಾಂಡ್, ಮಣಿಪುರ, ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಮಳೆಯ ಸೂಚನೆ ಸಿಕ್ಕಿದೆ. ಕೇರಳದಲ್ಲಿ ಮಳೆಯಾದರೆ ಕರ್ನಾಟಕದಲ್ಲೂ ಸ್ವಲ್ಪ ಮಟ್ಟಿಗೆ ಮಳೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.