Publish Date: Sat, 07 Jun 2025 (12:17 IST)
Updated Date: Sat, 07 Jun 2025 (12:19 IST)
ಬೆಂಗಳೂರು: ಮೇ ಕೊನೆಯ ವಾರದಲ್ಲಿ ಮುಂಗಾರು ಮಳೆ ಆರಂಭವಾಗಿದ್ದರೂ ಈಗ ನಾಲ್ಕೈದು ದಿನಗಳಿಂದ ಕೊಂಚ ಬಿಡುವು ಪಡೆದಿದೆ. ಈಗ ಮತ್ತೆ ಮಳೆ ಆರಂಭವಾಗುವುದು ಯಾವಾಗ ಎಂಬ ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ ನೋಡಿ.
ಮೇ 21 ರಿಂದ ಜೂನ್ 2 ರವರೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ದಕ್ಷಿಣ ಕನ್ನಡದಲ್ಲಂತೂ ಪ್ರವಾಹದ ಸ್ಥಿತಿಯಿತ್ತು. ಆದರೆ ಈಗ ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿದೆ. ಕೆಲವೆಡೆ ಮಾತ್ರ ಹನಿ ಮಳೆಯಾಗುತ್ತಿದೆ. ಉಳಿದೆಡೆ ಬಿಸಿಲಿನ ವಾತಾವರಣವಿದೆ.
ಇದಕ್ಕೆ ರಾಜ್ಯ ರಾಜಧಾನಿ ಬೆಂಗಳೂರು, ದಕ್ಷಿಣ ಕನ್ನಡವೂ ಹೊರತಲ್ಲ. ಮತ್ತೆ ಬೇಸಿಗೆಯ ವಾತಾವರಣ ನೋಡಿ ಜನ ಬೇಸತ್ತಿರುವಾಗಲೇ ಖುಷಿ ಕೊಡುವ ಸುದ್ದಿಯನ್ನು ಹವಾಮಾನ ಇಲಾಖೆ ನೀಡಿದೆ. ಮತ್ತೆ ರಾಜ್ಯದಲ್ಲಿ ಮಳೆಯ ಅಬ್ಬರ ಶುರುವಾಗಲಿದೆ.
ಜೂನ್ 11 ರಿಂದ ರಾಜ್ಯದಲ್ಲಿ ಮತ್ತೆ ಮುಂಗಾರು ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಯಿದೆ. ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲ, ಕಲಬುರಗಿ, ವಿಜಯಪುರದಂತಹ ಉತ್ತರದ ಜಿಲ್ಲೆಗಳಲ್ಲೂ ಮಳೆ ಚುರುಕಾಗಲಿದೆ. ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಹೇಳಿತ್ತು.