Publish Date: Wed, 04 Jun 2025 (08:21 IST)
Updated Date: Wed, 04 Jun 2025 (08:23 IST)
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವಾರ ಮಳೆಯ ಅಬ್ಬರವಿತ್ತು. ಆದರೆ ಈ ವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಇಂದು ಈ ಒಂದು ಜಿಲ್ಲೆಯಲ್ಲಿ ಮಾತ್ರ ಮಳೆಯಿರಲಿದೆ, ಉಳಿದೆಡೆ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರ ಪ್ರವಾಹ ಸ್ಥಿತಿಯಿತ್ತು. ಈ ವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಹಾಗಂತ ಮಳೆ ಮುಂದುವರಿದೇ ಇದೆ. ನಿನ್ನೆಯೂ ಹಲವೆಡೆ ಮಳೆಯಾಗಿತ್ತು. ಇಂದೂ ಮಳೆ ಮುಂದುವರಿಯಲಿದೆ. ಇಂದೂ ಈ ಜಿಲ್ಲೆಗೆ ಮಾತ್ರ ಭಾರೀ ಮಳೆಯಾಗುವ ಸೂಚನೆಯಿದೆ.
ಮುಂಗಾರು ಮಳೆ ಈ ಬಾರಿ ಬೇಗನೇ ಆರಂಭವಾಗಿತ್ತು. ಜೊತೆಗೆ ವಾಯುಭಾರ ಕುಸಿತವೂ ಇದ್ದಿದ್ದರಿಂದ ಭಾರೀ ಮಳೆಯಾಗಿತ್ತು. ಆದರೆ ಇದೀಗ ನಾಲ್ಕೈದು ದಿನಗಳಿಂದ ವರುಣ ಕೊಂಚ ಬ್ರೇಕ್ ಕೊಟ್ಟಿದ್ದಾನೆ. ಹೀಗಾಗಿ ಈ ವಾರ ಬೇರೆ ಜಿಲ್ಲೆಗಳಲ್ಲಿ ಭಾರೀ ಮಳೆಯ ಸೂಚನೆಯಿಲ್ಲ.
ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಕೊಡಗು, ಹಾವೇರಿ, ರಾಯಚೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಹಾಸನ, ತುಮಕೂರು,ಚಿತ್ರದುರ್ಗ, ಗದಗ, ಕೊಪ್ಪಳ, ಬಳ್ಳಾರಿ, ಚಾಮಾಜನಗರ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಭಾಗಶಃ ಮೋಡ ಕವಿದ ವಾತಾವರಣವಿರಲಿದೆ.