Publish Date: Mon, 02 Jun 2025 (08:23 IST)
Updated Date: Mon, 02 Jun 2025 (08:25 IST)
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಕಳೆದ ವಾರವಿಡೀ ಮುಂಗಾರು ಮಳೆಯ ಅಬ್ಬರ ನೋಡಿದ್ದಾರೆ. ಇದು ಇಷ್ಟಕ್ಕೇ ನಿಂತಿಲ್ಲ. ಈ ವಾರ ಈ ಎರಡು ಜಿಲ್ಲೆಯವರಿಗೆ ಹವಾಮಾನ ಎಚ್ಚರಿಕೆ ಗಮನಿಸಿ.
ಕಳೆದ ವಾರ ಎಡೆಬಿಡದೇ ಸುರಿದ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಾಗಿತ್ತು. ಹಲವು ಕಡೆ ಮನೆ, ರಸ್ತೆ ಕುಸಿದು ಸಾಕಷ್ಟು ಅನಾಹುತಗಳಾಗಿವೆ. ಹೀಗಾಗಿ ಮಳೆಯೆಂದರೆ ಭಯ ಹುಟ್ಟಿಸುವಂತಹ ಪರಿಸ್ಥಿತಿಯಾಗಿತ್ತು.
ಆದರೆ ಇದು ಇಷ್ಟಕ್ಕೇ ನಿಂತಿಲ್ಲ. ಈ ವಾರವೂ ಈ ಎರಡು ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ದಕ್ಷಿಣ ಕನ್ನಡದಲ್ಲಿ ಇಂದಿನಿಂದ ತೊಡಗಿ ಒಂದು ವಾರದವರೆಗೆ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.
ಇನ್ನು, ಉಡುಪಿ ಜಿಲ್ಲೆಯ ಪರಿಸ್ಥಿತಿಯೂ ಇದೇ ಆಗಿದೆ. ಈ ಜಿಲ್ಲೆಯಲ್ಲೂ ಈ ವಾರದ ಮೊದಲಾರ್ಧದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಆದರೆ ವಾರಂತ್ಯಕ್ಕೆ ಈ ಜಿಲ್ಲೆಯಲ್ಲಿ ವರುಣ ಕೊಂಚ ಬಿಡುವು ನೀಡಲಿದ್ದಾನೆ ಎಂದು ವರದಿಯಾಗಿದೆ. ಹಾಗಿದ್ದರೂ ಈ ಎರಡು ಜಿಲ್ಲೆಗಳ ಜನತೆ ಈ ವಾರವೂ ಅತೀವ ಎಚ್ಚರಿಕೆ ವಹಿಸುವುದು ಉತ್ತಮ.