ಬೆಂಗಳೂರು: ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರಶಃ ರಾಜಕೀಯ ಸಮಾವೇಶವಾಗಿದ್ದು, ಕಾಂಗ್ರೆಸ್ ಸರ್ಕಾರ ತಾಯಿ ಕನ್ನಡಾಂಬೆಗೆ ಘೋರ ಅಪಮಾನ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕನ್ನಡ ನಾಡಿನ ನುಡಿ ಪರಂಪರೆ, ಶ್ರೀಮಂತ ಸಾಹಿತ್ಯ, ಇತಿಹಾಸ, ಸಂಸ್ಕೃತಿಯನ್ನ ಸಂಭ್ರಮಿಸುವ ವೇದಿಕೆಯಾಗಬೇಕಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನ ರಾಜಕೀಯ ವೇದಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾಯಿ ಕನ್ನಡಾಂಬೆಗೆ, ಕನ್ನಡಿಗರ ತಾಯ್ನುಡಿಗೆ ಘೋರ ಅಪಮಾನ ಮಾಡಿದೆ.
ಮುಖ್ಯಮಂತ್ರಿಗಳ ಭಾಷಣದುದ್ದಕ್ಕೂ ರಾಜಕೀಯ ಕೆಸರೆರಚಾಟ, ಪುಸ್ತಕ ಮಳಿಗೆಗಳಲ್ಲಿ ರಾಜಕೀಯ ಪ್ರೇರಿತ ಪುಸ್ತಕಗಳ ಪ್ರದರ್ಶನ, ಮಾರಾಟ - ಇದೇನಾ ಸಾಹಿತ್ಯ ಸಮ್ಮೇಳನದ ಉದ್ದೇಶ?
ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ಇಟ್ಟಿರುವ ಎಲ್ಲ ರಾಜಕೀಯ ಪ್ರೇರಿತ ಪುಸ್ತಕಗಳನ್ನ ತೆರವು ಮಾಡಬೇಕು, ರಾಜಕೀಯ ಭಾಷಣಗಳಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಆಗ್ರಹಿಸುತ್ತೇನೆ.