ಹುಬ್ಬಳ್ಳಿ: ನೇಹಾ ಹತ್ಯೆ ಬಳಿಕ ಹುಬ್ಬಳ್ಳಿಯಲ್ಲಿ ಬಹಳ ಸದ್ದು ಮಾಡಿದ್ದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಆರೋಪಿ ಗಿರೀಶನನ್ನು ಗಾಯಗೊಂಡ ಸ್ಥಿತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಗಿರೀಶನನ್ನು ಸದ್ಯಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಆತ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿದುಬಂದಿದೆ. ಅಂಜಲಿ ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ದಾವಣಗೆರೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಅಲ್ಲಿಯೂ ಮಹಿಳೆಯೊಬ್ಬರ ಜೊತೆ ಗಲಾಟೆ ಮಾಡಿದ್ದಾನೆ.
ಸಿಟ್ಟಿನಲ್ಲಿ ಮಹಿಳೆಗೆ ಚಾಕು ಹಾಕಲೆತ್ನಿಸಿದಾಗ ರೈಲಿನಲ್ಲಿದ್ದ ಸಹ ಪ್ರಯಾಣಿಕರು ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಜನರಿಂದ ತಪ್ಪಿಸಿಕೊಳ್ಳಲು ಹಳಿ ಮೇಲೆ ಜಿಗಿದಿದ್ದ. ಈ ವೇಳೆ ಆತನಿಗೆ ಮುಖ, ಕಾಲಿಗೆ ಗಂಭೀರ ಗಾಯವಾಗಿದೆ. ಆತನನ್ನು ದಾವಣಗೆರೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆತ ಅಂಜಲಿ ಹಂತಕ ಎಂದು ಗೊತ್ತಾಗಿದೆ.
ಬಳಿಕ ಆತನನ್ನು ಹುಬ್ಬಳ್ಳಿಗೆ ಶಿಫ್ಟ್ ಮಾಡಲಾಗಿದೆ. ಗಿರೀಶನನ್ನು ಬಂಧಿಸಿರುವ ವಿಚಾರವನ್ನು ದೃಢಪಡಿಸಿರುವ ಹುಬ್ಬಳ್ಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಆತ ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಸದ್ಯಕ್ಕೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಬಂದಿದ್ದಾರೆ.